ಯಾದಗಿರಿ: ರಕ್ತದಾನ ಶಿಬಿರ, ಆಶಾ ಕಾರ್ಯಕರ್ತೆ, ಪೌರ ಕಾರ್ಮಿಕರಿಗೆ ಸನ್ಮಾನ

ಯಾದಗಿರಿ: ಮನುಷ್ಯನಾಗಿ ಹುಟ್ಟಿದ ನಾವುಗಳು ಜೀವನದಲ್ಲಿ ಯಾವುದಾದರೊಂದು ಸಾಧನೆ ಮಾಡಬೇಕು ಅಂದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಸೈದಾಪುರದ ಸಿದ್ಧಚೇತನಾಶ್ರಮ ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಶ್ರೀಗಳು ಹೇಳಿದರು.
ಸೈದಾಪುರ ಪಟ್ಟಣದ ಜಿ.ಆರ್. ಫಂಕ್ಷನ್ ಹಾಲ್ ನಲ್ಲಿ ಗುರುಮಠಕಲ್ ಮತಕ್ಷೇತ್ರದ ಕಾಂಗ್ರೆಸ್ ನಾಯಕ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಡಿ. ಮಾನೇಗಾರ ಅವರ ಜನ್ಮದಿನದ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಆಶಾ ಕಾರ್ಯಕರ್ತೆಯರ ಹಾಗೂ ಪೌರ ಕಾರ್ಮಿಕರ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರಮವಹಿಸಿ ದುಡಿದಾಗ ಮಾತ್ರ ದುಡ್ಡು ನಮ್ಮ ಕೈಸೇರುತ್ತದೆ. ಸಂಪತ್ತು ಗಳಿಸುವುದು ಮಾತ್ರವಲ್ಲದೆ ಅದನ್ನು ಸಮರ್ಪಕವಾಗಿ ಖರ್ಚು ಮಾಡುವ ವಿಧಾನ ಅತಿ ಮುಖ್ಯವಾಗಿದೆ. ನಾವು ಮಾಡಿದ ಖರ್ಚು ಪುಣ್ಯ ಕೆಲಸಕ್ಕೆ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಮಾನೇಗಾರ ಅವರ ಅಭಿಮಾನಿಗಳು ಕೈಗೊಂಡಿರುವ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿದ್ದು ಹುಟ್ಟು ಹಬ್ಬದ ಆಚರಣೆ ಸಾರ್ಥಕವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಯುವಕರು ದಾರಿ ತಪ್ಪುತ್ತಿರುವುದು ಅತ್ಯಂತ ಖೇದಕರ ಸಂಗತಿ, ಮೋಜು ಮಸ್ತಿಯಲ್ಲಿ ಜೀವನ ಹಾಳು ಮಾಡಿಕೊಳ್ಳದೆ ಸಮಾಜಮುಖಿ ಕೆಲಸ ಮಾಡುವುದು ಅತಿ ಮುಖ್ಯವಾಗಿದೆ. ಯರಗೋಳ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮಾನೇಗಾರ ಅವರು ಒಬ್ಬ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳುವಲ್ಲಿ ಆತನ ಪರಿಶ್ರಮದ ಜತೆಗೆ ಕುಟುಂಬದ ಸಹಕಾರ ಕೂಡ ಪ್ರಮುಖವಾಗಿರುತ್ತದೆ. ನನ್ನಿಂದ ಸಮಾಜಕ್ಕಾಗಿ ಏನಾದರೂ ಕೊಡಬೇಕು ಎಂಬ ಸಂಕಲ್ಪ ಹೊಂದಿದ ಮಾನೇಗಾರ ಅವರಿಗೆ ರಾಜಕೀಯವಾಗಿ ಉತ್ತಮ ಸ್ಥಾನಗಳು ದೊರೆತು ಜನಸೇವೆ ಮಾಡುವ ಭಾಗ್ಯ ಸಿಗಲಿ ಎಂದು ಆಶೀರ್ವದಿಸಿದರು.
ಶರಣಪ್ಪ ಮಾನೇಗಾರ ಅವರು ಮಾತನಾಡಿ, ಕಳೆದ ವರ್ಷದ ಜನ್ಮದಿನ ಆಚರಣೆಯಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವ ಕೆಲಸ ಮಾಡೋಣ ಎಂದು ಮನವಿ ಮಾಡಿದ್ದೆ, ಅದರಂತೆ ಈ ವರ್ಷ ನನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ರಕ್ತದಾನ ಶಿಬಿರ, ಆಶಾ ಕಾರ್ಯಕರ್ತೆಯರಿಗೆ, ಪೌರ ಕಾರ್ಮಿಕರಿಗೆ ಮತ್ತು ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲು ಅವಕಾಶ ಕಲ್ಪಿಸಿಕೊಟ್ಟ ನನ್ನ ಹಿತೈಷಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಜನರ ತೋರುತ್ತಿರುವ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗುವುದು, ಚಿರಋಣಿಯಾಗಿದ್ದೇನೆ ಎಂದು ಭಾವನಾತ್ಮಕವಾಗಿ ನುಡಿದರು.
ಜೀವನದಲ್ಲಿ ಜೀರೋ ಇದ್ದವರು ಆದವರು ಮಾತ್ರ ಹೀರೋ ಆಗಲು ಸಾಧ್ಯ, ನಮ್ಮನ್ನು ಎಲ್ಲಿ ಕಡೆಗಣಿಸಲಾಗುತ್ತಿದೆ, ಅಲ್ಲಿಯೇ ಬೆಳೆಯಬೇಕು ಎಂಬ ಛಲ ಹುಟ್ಟುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದು ಪ್ರತಿಭೆ ಇದ್ದೇ ಇರುತ್ತದೆ ಅದನ್ನು ಹೊರ ತೆಗೆಯುವುದೇ ಶಿಕ್ಷಣ. ಉದ್ಯೋಗಿಯಾಗಲ್ಲ, ಉದ್ಯಮಿಯಾಗುತ್ತೇನೆ ಎಂದು ಪಣ ತೊಟ್ಟು ಸರಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ನಾನು ಪ್ರಸ್ತುತ 250-300 ಜನರಿಗೆ ನೇರವಾಗಿ ಉದ್ಯೋಗ ನೀಡುತ್ತಿದ್ದೇನೆ ಎಂಬ ಹೆಮ್ಮೆ ಇದೆ ಎಂದರು.
ಎಐಸಿಸಿ ಅಧ್ಯಕ್ಷರಾದ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಜೀ ಅವರು ನನ್ನ ಜೀವನದ ರೋಲ್ ಮಾಡೆಲ್ ಆಗಿದ್ದಾರೆ. ನಾನು ನಮ್ಮ ತಂದೆ ಕಾಲದಿಂದಲೂ ಖರ್ಗೆ ಜೀವನ ನೋಡಿ ಅನುಕರಣೆ ಮಾಡಿ ಬೆಳೆದಿದ್ದೇನೆ ಅವರಲ್ಲಿರುವ ಶಿಸ್ತು, ಸಂಯಮ, ಬದ್ಧತೆ, ಸ್ಪಷ್ಟತೆ, ಸಿದ್ಧಾಂತ ಸ್ಪೂರ್ತಿಯಾಗಿದೆ. ಹೀಗಾಗಿ ನಾವು ಅಧಿಕಾರ ಇರಲಿ ಇಲ್ಲದಿರಲಿ, ಕಾಂಗ್ರೆಸ್ ಪಕ್ಷ ಮತ್ತು ಖರ್ಗೆ ಜೀ ಅವರನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಹುಟ್ಟಿದಾಗಿನಿಂದ ರಾಜಕೀಯದಲ್ಲಿ ದುಡಿಯುತ್ತಿದ್ದೇವೆ ಆದರೆ ನಿರೀಕ್ಷಿತ ಫಲ ಸಿಗುತ್ತಿಲ್ಲ, ಆದರೆ ಮುಂದೆ ಸಿಗಲಿದೆ ಎಂಬ ಆಶಾಭಾವನೆಯಿಂದ ಕೆಲಸ ಮಾಡುತ್ತಿದ್ದೇವೆ. ಪ್ರಯತ್ನ ನಮ್ಮದು ಫಲ ಭಗವಂತನದು, ಗುರುಮಠಕಲ್ ಮತಕ್ಷೇತ್ರದ ಜನ ಹಾರೈಕೆ ನಮ್ಮ ಮೇಲಿರಲಿ ಎಂದು ಶರಣಪ್ಪ ಮಾನೇಗಾರ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶರಣಿಕ ಕುಮಾರ ದೋಕಾ, ಕೆಪಿಸಿಸಿ ಸದಸ್ಯ ಚಂದ್ರಶೇಖರ ವಾರದ, ಸಾಯಿಬಣ್ಣ ಬೋರಬಂಡಾ, ವಿಶ್ವನಾಥ ನೀಲಹಳ್ಳಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ಸ್ಯಾಮಸನ್ ಮಾಳಿಕೇರಿ, ನಿರಂಜನರೆಡ್ದಿ ಪಾಟೀಲ ಶೆಟ್ಟಿಹಳ್ಳಿ, ಮೈನೊದ್ದಿನ್ ಗುರುಮಠಕಲ್, ಸಣ್ಣಹಣಮಂತಪ್ಪ ಬಳಿಚಕ್ರ, ಸುದರ್ಶನ ಪಾಟೀಲ ಜೈಗ್ರಾಮ, ಭೀಮರಾಯ ಠಾಣಗುಂದಿ, ಶರಣಪ್ಪ ಶೆಟಿಗೇರಾ, ಲಕ್ಷ್ಮೀಕಾಂತ ರೆಡ್ಡಿ, ಶರಣಪ್ಪ ಮೋಟನಳ್ಳಿ, ಬಸವರಾಜಪ್ಪ ಬಾಗ್ಲಿ, ಬಾಷುಮಿಯ ವಡಗೇರಾ, ಭೀಮಶೆಪ್ಪ ಮಾಸ್ತರ, ರಮೇಶ ಭೀಮನಳ್ಳಿ, ದೇವಪ್ಪಗೌಡ, ಬನ್ನಪ್ಪ ಹುಲಿ ಬೆಟ್ಟ, ಸಾಬಣ್ಣ ಗುತ್ತೇದಾರ ಇತರರಿದ್ದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮಲ್ಲು ಮಾಳಿಕೇರಿ, ತಿಮ್ಮಾರೆಡ್ಡಿ ಬೆಳಗುಂದಿ, ಆಂಜನೇಯ ಕಟ್ಟಿಮನಿ, ವಿಜಯ ಕಂದಳ್ಳಿ, ಮಂಜುನಾಥ ಮೇತ್ರಿ ಮಲ್ಹಾರ, ಬೀರಲಿಂಗಪ್ಪ ಕಿಲ್ಲನಕೇರಾ ಜುಬೇರ್ ಕಡೇಚೂರು, ಪುಂಡಲಿಕ ಗೊಂದಡಗಿ, ವೆಂಕಟೇಶ ನಾಯಕ ಕೂಡ್ಲೂರು, ಸಿದ್ದು ನಾಯಕ, ಸೂಗಪ್ಪ ಬೋಯಿನ, ಸುರೇಶ ಬೆಳಗುಂದಿ, ಹಣಮಂತ ರಾಚನಹಳ್ಳಿ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.







