ಯಾದಗಿರಿ| ರಾಜ್ಯದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯಲಿ: ಭೀಮರಾಯ ಭಂಡಾರಿ ಆಗ್ರಹ

ಯಾದಗಿರಿ: ರಾಜ್ಯದಲ್ಲಿ ಮುಖ್ಯ ಮಂತ್ರಿಗಳಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯಬೇಕು. ಬದಲಾವಣೆಯ ಅನಿವಾರ್ಯತೆ ಎದುರಾದರೇ ಸಚಿವರಾದ ಡಾ.ಪರಮೇಶ್ವರ್, ಸತೀಶ ಜಾರಕಿಹೊಳಿ ಅವರಲ್ಲಿ ಯಾರನ್ನಾದರೂ ಸಿಎಂ ಮಾಡಬೇಕೆಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಿಂಹ ಘರ್ಜನೆ ಸಂಘಟನೆ ಅಧ್ಯಕ್ಷ ಭೀಮರಾಯ ಭಂಡಾರಿ ಆಗ್ರಹಿಸಿದರು.
ಶುಕ್ರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೀಮರಾಯ ಭಂಡಾರಿ, ಈಗ ರಾಜ್ಯದಲ್ಲಿ ತಲೆದೊರಿರುವ ಸಿಎಂ ಸ್ಥಾನದ ಬಿಕ್ಕಟ್ಟಿಗೆ ಎಐಸಿಸಿ ಅಧ್ಯಕ್ಷರೇ ನೇರ ಹೊಣೆಯಾಗಿದ್ದಾರೆ. ಅವರು ಮನಸ್ಸು ಮಾಡಿದರೆ ಈ ರೀತಿ ಗದ್ದಲ ಆಗುತ್ತಿರಲಿಲ್ಲ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿಂತಿವೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜನಪರವಾಗಿರುವ ಸಿಎಂ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಯಾಕೆ? ಯಾರದ್ದೋ ಮಾತು ಕೇಳಿ ಸಿಎಂ ಬದಲಾವಣೆಗೆ ಕಾಂಗ್ರೆಸ್ ಪಕ್ಷದ ವರಿಷ್ದರು ಮುಂದಾಗಬಾರದೆಂದು ಭೀಮರಾಯ ಭಂಡಾರಿ ಆಗ್ರಹಿಸಿದರು.
ಈ ವೇಳೆ ಸಂಘಟನೆ ಪದಾಧಿಕಾರಿಗಳಾದ ಮರಿಲಿಂಗಪ್ಪ ಬಂಡೆ, ಮಲ್ಲಪ್ಪ ಪೂಜಾರಿ ಗಡ್ಡೆಸೂಗುರು ಉಪಸ್ಥಿತರಿದ್ದರು.





