ಯಾದಗಿರಿಯ 6 ತಾಲ್ಲೂಕುಗಳು ಬರ ಪಟ್ಟಿಗೆ ಸೇರ್ಪಡೆ : ಸರಕಾರಕ್ಕೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಅಭಿನಂದನೆ

ಯಾದಗಿರಿ: ಮುಂಗಾರು ಮಳೆಯ ಕೊರತೆಯಿಂದ ಉಂಟಾದ ಬರ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸಿದ ರಾಜ್ಯ ಸರ್ಕಾರ, ಯಾದಗಿರಿ ಜಿಲ್ಲೆಯ ಎಲ್ಲಾ ಆರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೊದಲ ಹಂತದಲ್ಲಿ 102 ಹಾಗೂ ಎರಡನೇ ಹಂತದಲ್ಲಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಸೆಪ್ಟೆಂಬರ್ 16ರಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆದ ನೈಸರ್ಗಿಕ ವಿಕೋಪಗಳ ಸಂಪುಟ ಉಪಸಮಿತಿ ಸಭೆಯಲ್ಲಿ ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆಗಳ ಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ರಾಜ್ಯದ 17 ಜಿಲ್ಲೆಗಳ 53 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದರು.
ಈ ಪಟ್ಟಿಯಲ್ಲಿ ಯಾದಗಿರಿ, ಗುರುಮಠಕಲ್, ವಡಗೇರಾ, ಹುಣಸಗಿ ಮತ್ತು ಸುರಪುರ ತಾಲೂಕುಗಳನ್ನೂ ಸೇರಿಸಿರುವುದರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳು ಬರಪೀಡಿತ ವ್ಯಾಪ್ತಿಗೆ ಬಂದಿವೆ. ಜಿಲ್ಲೆಯ ರೈತರಿಗೆ ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ತಾವು ಎರಡು ಬಾರಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾಗಿ ತಿಳಿಸಿದ ಶಾಸಕ ತುನ್ನೂರ, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಜಿಲ್ಲೆಯ ರೈತರ ಪರವಾಗಿ ಅಭಿನಂದನೆ ಸಲ್ಲಿಸಿದರು.
ರೈತರ ಬೆಳೆ ಹಾನಿಯ ನೈಜ ಚಿತ್ರಣ ಸರ್ಕಾರದ ಗಮನಕ್ಕೆ ಬರಬೇಕು. ಯಾವುದೇ ರೈತ ಬೆಳೆ ಹಾನಿಯ ದಾಖಲೀಕರಣದಿಂದ ಹೊರಗುಳಿಯಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ. ವೈಜ್ಞಾನಿಕ ಸಮೀಕ್ಷೆ ಮತ್ತು ನಿಖರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಮುಂದಿನ ಹಂತದಲ್ಲಿ ಅಧಿಕಾರಿಗಳ ತಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ನೇರವಾಗಿ ಪರಿಶೀಲಿಸಿ ಅಂತಿಮ ವರದಿ ಸಲ್ಲಿಸಲಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಕಂದಾಯ ಸಚಿವರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ರೈತರಿಗೆ ನೆರವು ನೀಡುವುದು ಸರ್ಕಾರದ ಮೊದಲ ಆದ್ಯತೆ :
ನಾಡಿನ ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಬೆಳೆ ಹಾನಿಯ ನೈಜ ವರದಿಯ ಆಧಾರದ ಮೇಲೆ ನಿಯಮಾನುಸಾರ ಅಗತ್ಯ ಪರಿಹಾರ ಮತ್ತು ನೆರವು ತಲುಪಿಸಲು ಸರ್ಕಾರ ಬದ್ಧವಾಗಿದೆ. ರೈತರು ಸಮೀಕ್ಷೆ ಕಾರ್ಯಕ್ಕೆ ಸಹಕರಿಸಬೇಕು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಮನವಿ ಮಾಡಿದ್ದಾರೆ.






