ಯಾದಗಿರಿ ನಿಲ್ದಾಣದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ನಿಲುಗಡೆಗೆ ಸೋಮಣ್ಣನವರೇ ಕಾರಣ: ಶಾಸಕ ಶರಣಗೌಡ ಕಂದಕೂರ

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿರುವ ವಿ. ಸೋಮಣ್ಣ ಅವರು ಮನಸ್ಸು ಮಾಡಿದ್ದರಿಂದಲೇ ವಂದೇ ಭಾರತ್ ಸ್ಲೀಪರ್ ರೈಲಿಗೆ ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲುಗಡೆ ಸೌಲಭ್ಯ ದೊರೆತಿದೆ ಎಂದು ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ನಗರದ ರೈಲು ನಿಲ್ದಾಣದಲ್ಲಿ ರವಿವಾರ ರಾತ್ರಿ ಆಯೋಜಿಸಿದ್ದ ವಂದೇ ಭಾರತ್ ಸ್ಲೀಪರ್ ರೈಲಿನ ನಿಲುಗಡೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ, ರೈಲಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಈ ರೈಲು ಸಂಚಾರ ಆರಂಭಿಸಲಿದೆ ಎಂಬ ಮಾಹಿತಿ ತಿಳಿದ ಕೂಡಲೇ ರೈಲಿಗೆ ಯಾದಗಿರಿಯಲ್ಲಿ ನಿಲುಗಡೆ ನೀಡುವಂತೆ ಮನವಿ ಮಾಡಲು ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಲು ತೆರಳಿದ್ದೆ. ಯಾದಗಿರಿ ಜಿಲ್ಲೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿದ್ದು, ಇಲ್ಲಿನ ಜನರ ಅನುಕೂಲಕ್ಕಾಗಿ ರೈಲು ನಿಲುಗಡೆ ಮಾಡಬೇಕು ಎಂದು ಮನವಿ ಮಾಡಲು ಬಯಸಿದ್ದೆ. ಆದರೆ, ಅಂದು ಸಚಿವರು ಕಾಶ್ಮೀರದಲ್ಲಿದ್ದರು. ಹೀಗಾಗಿ ದೂರವಾಣಿ ಮೂಲಕವೇ ಅವರಿಗೆ ವಿಷಯ ತಿಳಿಸಿದೆ. ಕೇವಲ ಎರಡು ನಿಮಿಷಗಳಲ್ಲಿ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿ ಗೋಪಾಲಕೃಷ್ಣನ್ ಅವರು ಸಂಪರ್ಕಿಸಿ ಬೇಡಿಕೆಯ ಕುರಿತು ಮಾಹಿತಿ ಪಡೆದುಕೊಂಡರು. ಸಚಿವರ ಸೂಚನೆಯಂತೆ ತಕ್ಷಣವೇ ಯಾದಗಿರಿಯಲ್ಲಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಯಿತು ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ, ವಿ. ಸೋಮಣ್ಣ ಅವರು ಸಚಿವರಾಗಿ ಹಾಗೂ ತಾನು ಶಾಸಕನಾಗಿ ಇರುವವರೆಗೂ ಯಾದಗಿರಿ ಜಿಲ್ಲೆಯಲ್ಲಿ ರೈಲ್ವೆ ಮತ್ತು ಜಲಶಕ್ತಿ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಶತಪ್ರಯತ್ನ ಮಾಡುವುದಾಗಿ ಕಂದಕೂರ ಹೇಳಿದರು.
ಗುರುಮಠಕಲ್ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲು ಕೇಂದ್ರ ಜಲಶಕ್ತಿ ಇಲಾಖೆಯಿಂದ ಅನುದಾನ ನೀಡುವಂತೆ ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಯಾದಗಿರಿಯಿಂದ ಬೆಂಗಳೂರಿಗೆ ಒಂದು ಪ್ಯಾಸೆಂಜರ್ ರೈಲು ಆರಂಭಿಸಬೇಕು ಹಾಗೂ ಕೋವಿಡ್‌ಗೂ ಮುನ್ನ ಸಂಚರಿಸುತ್ತಿದ್ದ, ಬಳಿಕ ಸ್ಥಗಿತಗೊಂಡಿರುವ ಇಂಟರ್‌ಸಿಟಿ ರೈಲನ್ನು ಮತ್ತೆ ಆರಂಭಿಸಬೇಕು ಎಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ. ಈ ಕುರಿತು ಸಚಿವ ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ದೀಪಾವಳಿ ನಂತರ ಮತ್ತೊಮ್ಮೆ ಈ ಬೇಡಿಕೆಗಳ ಕುರಿತು ಸಚಿವರನ್ನು ಭೇಟಿಯಾಗಿ ಮನವಿ ಮಾಡುವುದಾಗಿ ಹೇಳಿದರು.
ಯಾವ ಜನ್ಮದ ಋಣವೋ ಗೊತ್ತಿಲ್ಲ, ತುಮಕೂರಿನ ಸಂಸದರಾಗಿದ್ದರೂ ಸಚಿವ ಸೋಮಣ್ಣ ಅವರು ಯಾದಗಿರಿ ಜಿಲ್ಲೆಯ ಯಾವುದೇ ಬೇಡಿಕೆ ಸಲ್ಲಿಸಿದರೂ ಸ್ಪಂದಿಸಿ ಅನುಮೋದನೆ ನೀಡುತ್ತಿದ್ದಾರೆ. ಇದಕ್ಕಾಗಿ ಜಿಲ್ಲೆಯ ಜನರ ಪರವಾಗಿ ಸಚಿವ ಸೋಮಣ್ಣ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಯಾದಗಿರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಸ್ಲೀಪರ್ ರೈಲಿಗೆ ನಿಲುಗಡೆ ಕಲ್ಪಿಸಿರುವ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವ ವಿ. ಸೋಮಣ್ಣ ಅವರ ಕ್ರಮವನ್ನು ಸ್ವಾಗತಿಸಿದರು.
ಸರ್ಕಾರಗಳು ಯಾವುದೇ ಇರಲಿ, ಯಾದಗಿರಿ ರೈಲು ನಿಲ್ದಾಣದಲ್ಲಿ ಎಲ್ಲ ರೈಲುಗಳಿಗೂ ನಿಲುಗಡೆ ಸೌಲಭ್ಯ ದೊರೆಯುವ ನಿಟ್ಟಿನಲ್ಲಿ ಸಹಜವಾಗಿ ಕೆಲಸವಾಗಬೇಕು. ಆದರೆ, ಪ್ರತಿ ರೈಲಿನ ನಿಲುಗಡೆಗೂ ಜನಪ್ರತಿನಿಧಿಗಳು ಮನವಿ ಸಲ್ಲಿಸಿ ಒತ್ತಾಯಿಸಬೇಕಾದ ಪರಿಸ್ಥಿತಿ ಇದೆ. ಇಂತಹ ಸ್ಥಿತಿ ಮುಂದುವರಿಯಬಾರದು ಎಂದು ಹೇಳಿದರು.
ಈ ರೈಲಿನ ನಿಲುಗಡೆಗೆ ಶಾಸಕ ಶರಣಗೌಡ ಕಂದಕೂರ ನಡೆಸಿದ ಪ್ರಯತ್ನ ಮೆಚ್ಚುವಂತಹದ್ದು. ಸಚಿವ ಸೋಮಣ್ಣ ಅವರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಈ ಕೆಲಸ ಮಾಡಿಸಿದ್ದಾರೆ. ಇದಕ್ಕಾಗಿ ಕಂದಕೂರ, ಸಚಿವ ಸೋಮಣ್ಣ ಹಾಗೂ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಎಡಿಆರ್‌ಎಂ ಸಂಜೀವರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಎಂ ಸೌರವ್ ಪ್ರಕಾಶ್ ಹಾಗೂ ಯಾದಗಿರಿ ರೈಲು ನಿಲ್ದಾಣದ ವ್ಯವಸ್ಥಾಪಕ ಭಾಗೀರಥ ಮೀನಾ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಡಾ. ಉಮೇಶ್ ಜಾಧವ್, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಬಿಜೆಪಿ ಮುಖಂಡರಾದ ರಾಚಣ್ಣಗೌಡ, ದೇವಿಂದ್ರನಾಥ ನಾದ, ಸುಭಾಷಚಂದ್ರ ಕಟಕಟಿ, ನಾಗರತ್ನ ಅನಪುರ, ಶ್ರೀಧರ ಸಾಹುಕಾರ, ಮಲ್ಲಣ್ಣಗೌಡ ಕೌಳೂರ, ಟಿ.ಎನ್. ಭೀಮುನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಮರಯ್ಯ ಸ್ವಾಮಿ ಜಾಲಿಬೆಂಜ್ ಹಾಗೂ ರೈಲ್ವೆ ಟಿಸಿ ನಿರ್ಮಲಾ ಕಾರ್ಯಕ್ರಮ ನಿರೂಪಿಸಿದರು. ಹೊಸ ರೈಲನ್ನು ಸ್ವಾಗತಿಸಲು ಸಾವಿರಾರು ಜನರು ಆಗಮಿಸಿದ್ದರು.
ಸೇಡಂಗೆ ತೆರಳಿ ರಾಜಧಾನಿ ರೈಲು ಹತ್ತುತ್ತಿದ್ದರು :
ಯಾದಗಿರಿ ಜಿಲ್ಲೆಯಲ್ಲಿ ಈ ಹಿಂದೆ ರೈಲು ಸೌಲಭ್ಯಗಳ ಕೊರತೆ ಎಷ್ಟಿತ್ತು ಎಂಬುದಕ್ಕೆ ಉದಾಹರಣೆ ನೀಡಿದ ಶಾಸಕ ಶರಣಗೌಡ ಕಂದಕೂರ, ಇದೇ ಜಿಲ್ಲೆಯಲ್ಲಿ 48 ವರ್ಷಗಳ ಕಾಲ ರಾಜಕೀಯ ಮಾಡಿ ಅಧಿಕಾರ ಅನುಭವಿಸಿ, ಈಗ ದೆಹಲಿಯಲ್ಲಿ ರಾಜಕೀಯ ಮಾಡುತ್ತಿರುವವರು ಕೂಡ ರಾಜಧಾನಿ ರೈಲಿನಲ್ಲಿ ಪ್ರಯಾಣಿಸಲು ಪಕ್ಕದ ಸೇಡಂ ಪಟ್ಟಣಕ್ಕೆ ತೆರಳಬೇಕಾಗಿತ್ತು. ಆದರೆ, ಯಾದಗಿರಿ ರೈಲು ನಿಲ್ದಾಣದಲ್ಲಿ ರಾಜಧಾನಿ ರೈಲಿನ ನಿಲುಗಡೆಗೆ ಅವರು ಯಾವುದೇ ಪ್ರಯತ್ನ ಮಾಡಿರಲಿಲ್ಲ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸದೆ ಟೀಕಿಸಿದರು.
ತಮ್ಮ ತಂದೆ ನಾಗನಗೌಡ ಕಂದಕೂರ ಅವರ ಪ್ರಥಮ ಪುಣ್ಯಸ್ಮರಣೆ ಸಂದರ್ಭದಲ್ಲಿ ರಾಜಧಾನಿ ರೈಲಿಗೆ ಯಾದಗಿರಿಯಲ್ಲಿ ನಿಲುಗಡೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿತ್ತು ಎಂಬುದನ್ನು ಅವರು ಸ್ಮರಿಸಿದರು.
ಸೈದಾಪುರ ರೈಲು ನಿಲ್ದಾಣ ಮೇಲ್ದರ್ಜೆಗೆ ಪ್ರಯತ್ನ :
ಸೈದಾಪುರ ರೈಲು ನಿಲ್ದಾಣವನ್ನು ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ಮೇಲ್ದರ್ಜೆಗೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಶಾಸಕ ಶರಣಗೌಡ ಕಂದಕೂರ ತಿಳಿಸಿದರು.






