ವಿದ್ಯಾರ್ಥಿನಿಯರು ಓಬವ್ವನ ಶೌರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

ಯಾದಗಿರಿ: ಧೈರ್ಯ, ಶೌರ್ಯ, ದೇಶಭಕ್ತಿ ಎನ್ನುವ ಮಾತು ಕೇಳಿದರೆ ನೆನಪಾಗುವ ಮೊದಲ ಹೆಸರೇ ಓನಕೆ ಓಬವ್ವದ್ದು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದ ಲಿಂಗೇರಿ ಕೋನಪ್ಪ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ವೀರ ವನಿತೆ ಓನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಹೈದರಾಲಿಯ ಸೈನ್ಯ ಎದುರಿಸಿದ ಓಬವ್ವ ಕೇವಲ ಒಬ್ಬಳೇ ಕೋಟೆಯ ರಕ್ಷಣೆಗೆ ನಿಂತರು. ಅವರ ಧೈರ್ಯ, ದೃಢಸಂಕಲ್ಪ ಹಾಗೂ ದೇಶಪ್ರೇಮ ಇಂದಿನ ಯುವತಿಯರಿಗೆ ಜೀವನದ ಪಾಠವಾಗಬೇಕು ಎಂದು ಹೇಳಿದರು.
ಚಿತ್ರದುರ್ಗ ಕೋಟೆಯ ಇತಿಹಾಸ ಓದಿದರೆ, ಓಬವ್ವನ ಸಾಹಸ ದೇಶಭಕ್ತಿಯ ಉನ್ನತ ಉದಾಹರಣೆ ಎಂಬುದು ಗೋಚರಿಸುತ್ತದೆ. ಮಹಿಳೆಯರು ಓಬವ್ವನ ಬಲ, ತಾಳ್ಮೆ ಮತ್ತು ನಿಷ್ಠೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಿತಿ ಅಧ್ಯಕ್ಷ ಮರೆಪ್ಪ ಚಟ್ಟೇರಕರ್, ಉಮಾದೇವಿ ಮಟ್ಟಿ, ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾ ದೇವಿ, ಕಾಲೇಜು ಪ್ರಾಂಶುಪಾಲರು ಉಮಾದೇವಿ ಮಟ್ಟಿ, ಡಿಎಸ್ಪಿ ಸುರೇಶ್ ಸೈದಪ್ಪ ಕೂಲೂರು, ವಿಜಯಕುಮಾರ್ ಮಡ್ಡಿ, ಭೀಮರಾಯ ಹೊಸಮನಿ, ಗೋಪಾಲ ತೆಳಗೇರಿ, ಕಾಶಿನಾಥ ನಾಟೇಕಾರ್ ನಿಂಗಪ್ಪ ಕೊಲ್ಲೂರ್, ಬೌದ್ಧ ಉಪಸಕ ಮಹದೇವಪ್ಪ ಬಿಜೆಸಪುರ್, ಭೀಮರಾಯ ಹೊಸಮನಿ,ಸೇರಿದಂತೆ ಅನೇಕ ದಲಿತ ಮುಖಂಡರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಮಂಜುನಾಥ ಗುರುಸಣಗಿ ನಿರೂಪಿಸಿದರು.







