ಸೇಡಂ-ಯಾದಗಿರಿ ಬಸ್ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳ ರಸ್ತೆ ತಡೆ ಪ್ರತಿಭಟನೆ

ಯಾದಗಿರಿ: ಸೇಡಂ-ಯಾದಗಿರಿ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬಾರದಿರುವುದು, ವಿದ್ಯಾರ್ಥಿಗಳಿಗೆ ಸಮರ್ಪಕ ಆಸನ ವ್ಯವಸ್ಥೆ ಇಲ್ಲದಿರುವುದು ಹಾಗೂ ಸಾರಿಗೆ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಡಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು.
ಹತ್ತುಕುಣಿ, ಯಡಹಳ್ಳಿ, ಹೊರುಂಚ-ಹೊರುಂಚ ತಾಂಡಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿದಿನ ಇದೇ ಮಾರ್ಗದ ಬಸ್‌ಗಳನ್ನು ಅವಲಂಬಿಸಿ ಶಾಲೆ ಹಾಗೂ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಆದರೆ ಬಸ್‌ಗಳು ನಿಗದಿತ ವೇಳೆಗೆ ಬಾರದಿರುವುದು, ಬಂದ ಬಸ್‌ಗಳಲ್ಲಿ ಅತಿಯಾದ ಜನಸಂದಣಿಯಿಂದ ವಿದ್ಯಾರ್ಥಿಗಳಿಗೆ ಕೂರಲು ಆಸನ ಸಿಗದಿರುವುದು ಸಾಮಾನ್ಯವಾಗಿದ್ದು, ಅನೇಕ ವಿದ್ಯಾರ್ಥಿಗಳು ಜೀವದ ಹಂಗು ತೊರೆದು ನಿಂತುಕೊಂಡೇ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಿಗ್ಗೆ 8.00 ಗಂಟೆಯಿಂದ 10.30 ಗಂಟೆಯವರೆಗೆ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಸೇಡಂ ಕಡೆಗೆ ತೆರಳುತ್ತಿದ್ದ ಐದು ಬಸ್‌ಗಳು ಹಾಗೂ ಯಾದಗಿರಿ ಕಡೆಗೆ ಸಂಚರಿಸುತ್ತಿದ್ದ ಮೂರು ಬಸ್‌ಗಳನ್ನು ಸಂಪೂರ್ಣವಾಗಿ ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಎರಡೂ ದಿಕ್ಕಿನ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳಾದ ಯೋಹಾನ, ಆಕಾಶ್, ಜಾಕ್ಸನ್, ಮುರಳಿ ಹಾಗೂ ಬಾಬು ಮಾತನಾಡಿ, ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಒದಗಿಸಿ, ನಿಗದಿತ ವೇಳೆಗೆ ಬಸ್‌ಗಳನ್ನು ಸಂಚರಿಸುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರತಿಭಟನೆ ನಡೆದರೂ ಸ್ಥಳಕ್ಕೆ ಯಾವುದೇ ಸಂಬಂಧಪಟ್ಟ ಸಾರಿಗೆ ಇಲಾಖೆ ಅಥವಾ ಆಡಳಿತದ ಅಧಿಕಾರಿಗಳು ಆಗಮಿಸದಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಯಿತು ಎನ್ನಲಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು ಎಂದು ತಿಳಿದು ಬಂದಿದೆ.






