ಸುರಪುರ | ತಳವಾರಗೇರಾ ಗ್ರಾಮ ದೇವತೆ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ : ಡಿಸಿ ಹರ್ಷಲ್ ಭೋಯರ್

ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ ಡಿ.16 ರಿಂದ 17ರ ವರೆಗೆ ನಡೆಯಲಿರುವ ಗ್ರಾಮ ದೇವತೆ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಾಜ್ಞೆ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಹೊರಡಿಸಿದ್ದಾರೆ.
ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ಮತ್ತು ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯಮಗಳು, 1960ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸುರಪುರ ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ 2025ರ ಡಿ.16 ರಿಂದ 17ರ ವರೆಗೆ ನಡೆಯಲಿರುವ ಮರೆಮ್ಮ, ಕೆಂಚಮ್ಮ ದೇವರುಗಳ ಜಾತ್ರೆಯಲ್ಲಿ ದೇವರ ಹೆಸರಲ್ಲಿ ಪ್ರಾಣಿ ಬಲಿ ಅಂದರೆ ಕುರಿ ಮತ್ತು ಕೋಣ ಬಲಿ ಕೊಡುವುದನ್ನು ಅಂದು ತಳವಾರಗೇರಾ ಗ್ರಾಮದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ 3 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಿ ಈ ಕೆಳಗಿನ ಅಂಶಗಳನ್ನು ಅನುಸರಿಸಲು ಆದೇಶಿಸಿದೆ.
ಯಾವುದೇ ಕಾರಣಕ್ಕೂ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ, 1959 ಮತ್ತು ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯಮಗಳು, 1960ರ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು, ಈ ಗ್ರಾಮದಲ್ಲಿ ಈ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಸಂಬಂಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ವಾಣಗೇರಾ ಇವರಿಗೆ ವಹಿಸಿಕೊಡಲಾಗಿದೆ.
ಗ್ರಾಮದಲ್ಲಿ ಸೂಕ್ತ ಪೊಲೀಸ್ ಬಂದೊಬಸ್ತ್ ಒದಗಿಸಲು ಹಾಗೂ ಮುಂಜಾಗ್ರತಾ ಕ್ರಮಕೈಗೊಳ್ಳಲು ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಯಾದಗಿರಿ ಸಹಾಯಕ ಆಯುಕ್ತರು, ಯಾದಗಿರಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಉಪನಿರ್ದೇಶಕರು, ಸುರಪುರ ತಹಶೀಲ್ದಾರರು, ಸುರಪುರ ತಾಲ್ಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಇವರಿಗೆ ನಿರ್ದೇಶಿಸಿ ಆದೇಶಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







