ಸುರಪುರ | ಶಾಲಾ–ಕಾಲೇಜು ಕಾರ್ಯಕ್ರಮಗಳ ಬ್ಯಾನರ್‌ಗಳಲ್ಲಿ ಶೇ.60 ಕನ್ನಡ ಕಡ್ಡಾಯಗೊಳಿಸಲು ಆಗ್ರಹ

ಸುರಪುರ : ತಾಲೂಕಿನ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆ–ಕಾಲೇಜುಗಳಲ್ಲಿ ನಡೆಯುವ ವಾರ್ಷಿಕೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ವೇದಿಕೆ ಬ್ಯಾನರ್‌ಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಬಳಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ, ಇತ್ತೀಚೆಗೆ ರಂಗಪೇಟೆಯಲ್ಲಿನ ಖಾಸಗಿ ಶಾಲೆಯೊಂದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವೇದಿಕೆಯ ಬ್ಯಾನರ್‌ನಲ್ಲಿ ಸಂಪೂರ್ಣ ಇಂಗ್ಲಿಷ್ ಬಳಕೆಯಾಗಿದ್ದು, ಕನ್ನಡವನ್ನು ನಿರ್ಲಕ್ಷ್ಯ ಮಾಡಿರುವುದು ಖಂಡನೀಯವಾಗಿದೆ ಎಂದು ಹೇಳಿದರು.
ಸರ್ಕಾರದ ನಿಯಮದಂತೆ ಎಲ್ಲಾ ನಾಮಫಲಕಗಳು ಮತ್ತು ಸಾರ್ವಜನಿಕ ಬ್ಯಾನರ್‌ಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಸುವುದು ಕಡ್ಡಾಯವಾಗಿದೆ. ಆದರೆ ಶಾಲಾ–ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಈ ನಿಯಮ ಉಲ್ಲಂಘನೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ನಡೆಯುವ ವಾರ್ಷಿಕೋತ್ಸವ ಹಾಗೂ ಇತರೆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಶೇ.60 ಕನ್ನಡ ಕಡ್ಡಾಯಗೊಳಿಸುವ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸುವ ಶಾಲೆಗಳ ಕಾರ್ಯಕ್ರಮಗಳ ವಿರುದ್ಧ ಸಂಘಟನೆಯಿಂದ ಪ್ರತಿಭಟನೆ ನಡೆಸಿ, ಕಾರ್ಯಕ್ರಮ ರದ್ದುಗೊಳಿಸಲು ಒತ್ತಾಯಿಸಲಾಗುವುದು. ಮುಂದಾಗುವ ಯಾವುದೇ ಅನಾಹುತಗಳಿಗೆ ಶಿಕ್ಷಣ ಇಲಾಖೆಯೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘಟನೆಯ ಉಪಾಧ್ಯಕ್ಷ ನಾಗೇಂದ್ರ ದೊರೆ ಚಂದಲಾಪುರ, ಸಂಚಾಲಕ ಮಲ್ಲಿಕಾರ್ಜುನ ರೊಡ್ಡರ, ಮುಖಂಡರಾದ ರಘುವೀರ ದೇಸಾಯಿ, ರಮೇಶ ರೊಡ್ಡರ ಬೇವಿನಾಳ, ಯಲ್ಲಪ್ಪ ಮಹಾರಾಜ, ಮೌನೇಶ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







