ಸುರಪುರ | ಮೆಹಂದಿ ಕಲೆಯ ಮೂಲಕ ದಾಖಲೆಗೆ ಮುಂದಾದ ಕೀರ್ತಿ ಹೊಸಮನಿ

ಸುರಪುರ: ಅತ್ಯಂತ ಉದ್ದನೆಯ ಬಟ್ಟೆಯ ಮೇಲೆ ನಿರಂತರವಾಗಿ 22 ಗಂಟೆಗಳ ಕಾಲ ಮೆಹಂದಿ ಕಲೆಯ ಚಿತ್ರ ಬಿಡಿಸುವ ಮೂಲಕ ದಾಖಲೆ ಮಾಡಲು ಪಟ್ಟಣದ ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಮುಂದಾಗಿದ್ದಾಳೆ.
ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಪಟ್ಟಣದ ಸತ್ಯಂಪೇಟೆಯ ಕೀರ್ತಿ ಹೊಸಮನಿ ಇಂತಹ ಒಂದು ಸಾಧನೆ ಮಾಡಲು ಮುಂದಾಗಿದ್ದಾರೆ.
ಇದೇ ರೀತಿಯ ಸಾಧನೆಯನ್ನು ಈಗಾಗಲೇ ಮಂಡ್ಯ ಜಿಲ್ಲೆಯ ಕೀರ್ತಿ ಮುರಳಿಧರ ಎನ್ನುವವರು ಮೇ 4 2026 ರಂದು 100 ಫೀಟ್ ಉದ್ದದ ಬಟ್ಟೆಯ ಮೇಲೆ ಮೆಹಂದಿ ಕಲೆಯ ಚಿತ್ರ ಬಿಡಿಸಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ. ಈ ದಾಖಲೆಯನ್ನು ಹಿಂದಿಸಲು ಈಗ ವಿದ್ಯಾರ್ಥಿನಿ ಕೀರ್ತಿ ಹೊಸಮನಿ ಮುಂದಾಗಿದ್ದಾರೆ.
ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ 70 ಫೀಟ್ ಉದ್ದನೆಯ ಬಟ್ಟೆ ಮೇಲೆ ಮೆಹಂದಿಯ ಚಿತ್ರ ಬಿಡಿಸಿದ್ದು, ಒಟ್ಟು 22 ಗಂಟೆಗಳ ಮೂಲಕ 150 ಫೀಟ್ ಉದ್ದನೆಯ ಮೆಹಂದಿ ಚಿತ್ರ ಬಿಡಿಸುವ ಮೂಲಕ ತಾನು ಕೂಡ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಲು ಮುಂದಾಗಿದ್ದಾಳೆ.
ತಾನು ಮೆಹಂದಿ ಬಿಡಿಸುತ್ತಿರುವುದನ್ನು ನಿರಂತರವಾಗಿ ಮೊಬೈಲ್ ಗಳ ಮೂಲಕ ಚಿತ್ರೀಕರಿಸಲಾಗುತ್ತಿದೆ. ಈಗಾಗಲೇ ಎಂಟು ಗಂಟೆ ನಿರಂತರ ಚಿತ್ರ ಬಿಡಿಸಿದ್ದು ಇನ್ನುಳಿದ ಸಮಯ ಸೇರಿ ಒಟ್ಟು 22 ಗಂಟೆಗಳ ಸಮಯದ ನಿಗದಿ ಹಾಕಿಕೊಂಡಿರುವುದಾಗಿ ವಿದ್ಯಾರ್ಥಿನಿ ಕೀರ್ತಿ ಹೊಸಮನಿ ತಿಳಿಸಿದ್ದಾಳೆ.
ವಿದ್ಯಾರ್ಥಿನಿಯ ಈ ಪ್ರಯತ್ನಕ್ಕೆ ಮಹಾವಿದ್ಯಾಲಯದ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿಗಳು ಕೂಡ ಪ್ರೋತ್ಸಾಹಿಸಿ ಶುಭ ಹಾರೈಸಿದ್ದಾರೆ.






