ಸುರಪುರ: ವಲ್ಲಭ ಭಾಯ್ ಪಟೇಲ್ ಜಯಂತಿ ಆಚರಣೆ; ನಶಾ ಮುಕ್ತ ಸಮಾಜ ನಿರ್ಮಾಣ ಸಂಕಲ್ಪ

ಸುರಪುರ: ಪಟ್ಟಣದ ಜನನಿ ಮಹಾವಿದ್ಯಾಲಯದಲ್ಲಿ ನರೇಶ ಕುಮಾರ್ ಸೇವಾ ಸಂಸ್ಥೆ, ಮೇರಾ ಯುವ ಭಾರತ್ ಯಾದಗಿರಿ ಹಾಗೂ ಜನನಿ ಮಹಾವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತಿ ಆಚರಣೆ ಹಾಗೂ ಸಶಾ ಮುಕ್ತ ಸಮಾಜ ನಿರ್ಮಾಣ ಸಂಕಲ್ಪ ಕಾರ್ಯಕ್ರಮ ನಡೆಯಿತು. ಇದೇವೇಳೆ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಸ್ಥ ಹಾಗೂ ಉಪನ್ಯಾಸಕರಾದ ಆದಿಶೇಷ ನೀಲಗಾರ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನ, ಹೋರಾಟ ಹಾಗೂ ದೇಶದ ಏಕೀಕರಣದಲ್ಲಿ ಅವರು ಸಲ್ಲಿಸಿದ ಅಪಾರ ಕೊಡುಗೆಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಸಚಿನ್ ಕುಮಾರ್ ನಾಯಕ್ ಮಾತನಾಡಿ, ಯುವಜನರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುವಜನರನ್ನು ದುಶ್ಚಟಗಳಿಂದ ದೂರವಿದ್ದು ದೇಶದ ಭವಿಷ್ಯವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ರಾಣಿ ಈಶ್ವರಮ್ಮ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ದೇಶಕ್ಕಾಗಿ ಹೋರಾಡಿದ ಮಹಿಳೆಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಲ್ಲಿ ದೇಶಾಭಿಮಾನ, ಸಾಮಾಜಿಕ ಕಳಕಳಿ ಹಾಗೂ ಸಂಸ್ಕಾರಗಳನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ನಾಗಭೂಷಣ ಯಾಳಗಿ, ಮಹಿಳೆಯರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಇತಿಹಾಸ ತಿಳಿದುಕೊಳ್ಳಬೇಕು. ವಚನಕಾರರು, ಸಾಹಿತಿಗಳು ಹಾಗೂ ತತ್ವಪದಕಾರರ ವಿಚಾರಧಾರೆಗಳನ್ನು ಅಧ್ಯಯನ ಮಾಡುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿ ಸಿದ್ದರಾಮ ಬೇವಿನಮಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರವೇ ಸ್ವಾಭಿಮಾನಿ ಬಣದ ನಗರ ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಅಪ್ಪು ನಾಯಕ ಪೂಜಾರಿ ದರ್ಶನ್, ರಾಯಪ್ಪ, ಸುನೀಲ್, ದೊಡ್ಡಪ್ಪ, ವಿದ್ಯಾರ್ಥಿಗಳು ಭಾಗವಹಿಸಿದ್ದರು.






