ಸುರಪುರ | ಉಪನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ: ತನಿಖೆಗೆ ಡಿಎಸ್ಎಸ್ ಆಗ್ರಹ

ಸುರಪುರ: ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಮುಖಂಡರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ಜಮೀನುಗಳ ಖರೀದಿ–ಮಾರಾಟಕ್ಕಾಗಿ ಕಚೇರಿಗೆ ಆಗಮಿಸುವ ರೈತರಿಂದ ಮೊದಲು ಚಲನ್ ಹಣ ಪಾವತಿಸಿಕೊಂಡು, ಬಳಿಕ ರಶೀದಿಯ ಹೆಸರಿನಲ್ಲಿ ಮತ್ತೆ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಉಪನೋಂದಣಾಧಿಕಾರಿಗಳು ಕಳೆದ ಐದು ವರ್ಷಗಳಿಂದ ಇದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದುವರೆಗೂ ಅವರ ವರ್ಗಾವಣೆ ಆಗಿಲ್ಲ. ಸರ್ಕಾರ ಕೂಡಲೇ ಅವರನ್ನು ವರ್ಗಾವಣೆ ಮಾಡಿ, ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಯ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಉದ್ದೇಶಿಸಿ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಕಚೇರಿಯ ಸಿರಸ್ತೆದಾರರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಗೋಪಾಲ ಛಲವಾದಿ ವಜ್ಜಲ್, ತಾಲೂಕು ಸಂಚಾಲಕ ಹಣಮಂತ ಭದ್ರಾವತಿ, ವಿಭಾಗಿಯ ಸಂಚಾಲಕ ಹೊನ್ನಪ್ಪ ರಸ್ತಾಪುರ, ರಾಜ್ಯ ಖಜಾಂಚಿ ಶರಣಪ್ಪ ಗುಳಬಾಳ, ಬಸವರಾಜ ಚಿಂಚೋಳಿ, ಶಿವಶರಣ ಯಾಳಗಿ, ಶಿವಪ್ಪ ಕಂಬಾರ, ಮಂಜುನಾಥ ಕೊಂಬೀನ್, ಹಣಮಂತ ಬೊಮ್ಮನಹಳ್ಳಿ, ಗ್ಯಾನಪ್ಪ ಹುಣಸಿಹೊಳೆ, ಮಲ್ಲಪ್ಪ ಛಲವಾದಿ, ಮರೆಪ್ಪ ಬಡಿಗೇರ, ಗೋಪಾಲ ಬಾಗಲಕೋಟೆ, ಗೋಪಾಲ ಛಲವಾದಿ, ಪಿಡ್ಡ ನಾಯಕ, ರಾಜು ದರಬಾರಿ, ಚಂದಪ್ಪ ಪಂಚಮ್, ಮಾನಪ್ಪ ಹುಣಸಿಹೊಳೆ, ಭೀಮರಾಯ ಛಲವಾದಿ, ತಾಯಪ್ಪ ಕುಂಬಾರಪೇಟ, ದೇವಿಂದ್ರಪ್ಪ ಬೇವಿನಾಳ, ಸಿದ್ದಪ್ಪ ಭಂಡಾರಿ, ಬಸವರಾಜ ಭಜಂತ್ರಿ, ಕಿರಣ ಕುಮಾರ ಭದ್ರಾವತಿ, ಹಣಮಂತ ಮಿಲಿಟರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.






