ಸುರಪುರ | ದಲಿತರ ಭೂಮಿ, ವಸತಿ ಹಕ್ಕಿಗಾಗಿ ಅಂಬೇಡ್ಕರ್ ವಾದ ಸಂಘಟನೆಯಿಂದ ಧರಣಿ
ದಲಿತರ ಭೂಮಿ, ವಸತಿ ಬೇಡಿಕೆಯನ್ನು ಸರಕಾರ ಕೂಡಲೇ ಈಡೇರಿಸಬೇಕು : ಮಾಳಪ್ಪ ಕಿರದಳ್ಳಿ

ಸುರಪುರ: ರಾಜ್ಯ ಮತ್ತು ದೇಶದಲ್ಲಿನ ಎಲ್ಲ ದಲಿತರು ಕಳೆದ ಅನೇಕ ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿರುವ ಜಮೀನುಗಳಿಗೆ ಸರಕಾರ ಕೂಡಲೇ ಹಕ್ಕು ಪತ್ರವನ್ನು ನೀಡಿ ದಲಿತರ ಭೂಮಿ ಮತ್ತು ವಸತಿ ಬೇಡಿಕೆಯನ್ನು ಈಡೇರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ಒತ್ತಾಯಿಸಿದರು.
ನಗರದ ತಹಶೀಲ್ದಾರ್ ಕಚೇರಿ ಮುಂದೆ ನಡೆದ ಒಂದು ದಿನದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಅವರು, ಇಂದು ನಮ್ಮ ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಎಲ್ಲಾ ತಹಶೀಲ್ದಾರ್ ಕಚೇರಿಗಳ ಮುಂದೆ ಧರಣಿಯನ್ನು ನಡೆಸಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಗೋಪಾಲ ವಜ್ಜಲ್ ಮಾತನಾಡಿದರು.
ನಂತರ ಸಾಯಂಕಾಲದ ವೇಳೆ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿ ಸಿರಸ್ತೆದಾರ ಮೂಲಕ ಸಲ್ಲಿಸಿದರು.
ಧರಣಿಯಲ್ಲಿ ಸಂಘಟನೆ ತಾಲೂಕು ಸಂಚಾಲಕ ಶರಣಪ್ಪ ತಳವಾರಗೇರ, ಗೊಲ್ಲಾಳಪ್ಪ ಕಟ್ಟಿಮನಿ, ಪರಶುರಾಮ ಸಾಸನೂರ, ಮಲ್ಲಿಕಾರ್ಜುನ ಹಾದಿಮನಿ, ಪ್ರಕಾಶ ಕಟ್ಟಿಮನಿ, ಪ್ರಶಾಂತ ಉಗ್ರಂ, ಶರಣು ಅಂಬರಖೇಡ, ಲಾಲು ಚವ್ಹಾಣ, ಮಲ್ಲಿಕಾರ್ಜುನ ವಾಗಣಗೇರಿ, ಮೌನೇಶ ತೆಗ್ಗೆಳ್ಳಿ, ಬಲಭೀಮ ಹಾದಿಮನಿ, ಸುರೇಶ ಸಾಸನೂರ,ನಾಗಪ್ಪ ದೊಡ್ಮನಿ,ಹಣಮಂತ ಹೊಸ್ಮನಿ,ಸದಾನಂದ ಕಟ್ಟಿಮನಿ, ಮಲ್ಲು ಕೆ.ಸಿ.ಪಿ., ಹಣಮಂತ ಅಂಬಲಿಹಾಳ, ಕೆಂಚಪ್ಪ ಕಟ್ಟಿಮನಿ, ಬಸವರಾಜ ಶಖಾಪುರ, ಹಣಮಂತ, ಬಸವರಾಜ ಮದ್ರಕಿ,ಸುರೇಶ ಚಿಕ್ಕನಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಹೂವಿನಹಳ್ಳಿ ಗ್ರಾಮದ ಸರಕಾರಿ ಭೂಮಿ ಸರ್ವೇ ನಂಬರ್ 21, 22 ಮತ್ತು 23ರಲ್ಲಿ ನಿರ್ಮಿಸಿರುವ ಅನಧಿಕೃತ ಗೋಡಾನ್ ಕೂಡಲೇ ತೆರವುಗೊಳಿಸಿ ಸರಕಾರಿ ಭೂಮಿ ರಕ್ಷಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಸಂಘಟನೆ ಇದೇ ವಿಷಯಕ್ಕಾಗಿ ಹೋರಾಟ ನಡೆಸಲಿದೆ.
- ಮಾಳಪ್ಪ ಕಿರದಳ್ಳಿ ಜಿಲ್ಲಾ ಸಂಚಾಲಕ ಕೆಡಿಎಸ್‌ಎಸ್ ಅಂಬೇಡ್ಕರ್ ವಾದ







