ಸುರಪುರ | ಮತಗಳ್ಳತನ ತಡೆಗೆ ಬೂತ್ ಮಟ್ಟದ ಕಾರ್ಯಕರ್ತರು ಜಾಗೃತರಾಗಬೇಕು: ಶಾಸಕ ರಾಜಾ ವೇಣುಗೋಪಾಲ ನಾಯಕ

ಸುರಪುರ: ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರ ರಚನೆಯಾಗಲು ಕಾರ್ಯಕರ್ತರು ಮತಗಳ್ಳತನ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆ ರಾಜಾ ವೆಂಕಟಪ್ಪ ನಾಯಕ ಅವರು ಸೋಲಲು ಮತಗಳ್ಳತನವೇ ಕಾರಣವಾಗಿತ್ತು ಎಂದು ಆರೋಪಿಸಿದ ಅವರು, ಪಕ್ಕದ ಮುದ್ದೆಬಿಹಾಳ ಹಾಗೂ ತಾಳಿಕೋಟಿ ತಾಲೂಕುಗಳಿಂದ ಮತದಾರರನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಅಕ್ರಮವಾಗಿ ಮತ ಹಾಕಿಸಲಾಗಿತ್ತು. ಮುಂದಿನ ದಿನಗಳಲ್ಲಿ ಇಂತಹ ಮತಗಳ್ಳತನ ನಡೆಯದಂತೆ ತಡೆಯಬೇಕಾದರೆ ಕಾರ್ಯಕರ್ತರು ಜಾಗೃತರಾಗಬೇಕು. ನಿಧನರಾದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆರವುಗೊಳಿಸುವುದು ಹಾಗೂ ಹೊಸ ಮತದಾರರ ಸೇರ್ಪಡೆ ಕುರಿತು ಎಚ್ಚರ ವಹಿಸುವಂತೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪೂರ ಮಾತನಾಡಿ, ಬಿಜೆಪಿ ಪಕ್ಷ ಕಳ್ಳದಾರಿಯ ಮೂಲಕ ಮತಗಳ್ಳತನ ಮಾಡಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಗ್ರಾಮ ಮಟ್ಟ ಹಾಗೂ ಬೂತ್ ಮಟ್ಟದಲ್ಲಿ ಮತಗಳ್ಳತನ ನಡೆಯದಂತೆ ಕಾರ್ಯಕರ್ತರು ಎಚ್ಚರ ವಹಿಸಿದರೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭೆಯಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಮತ್ತೆ ರಾಜಾ ವೇಣುಗೋಪಾಲ ನಾಯಕ ಅವರೇ ಶಾಸಕರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ ವಜ್ಜಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಸೇರಿದಂತೆ ಇತರರು ಮಾತನಾಡಿದರು.
ಸಭೆಯ ವೇದಿಕೆಯಲ್ಲಿ ಕೆವೈಡಿಸಿ ಅಧ್ಯಕ್ಷ ವಿಠ್ಠಲ್ ಯಾದವ್, ನಯೋಪ್ರಾ ಮಾಜಿ ಅಧ್ಯಕ್ಷ ರಾಜಾ ವಾಸುದೇವ ನಾಯಕ, ಬಸವರಾಜ ಜಮದರಖಾನಿ, ಮಲ್ಲಣ್ಣ ಸಾಹುಕಾರ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ದೊಡ್ಡ ದೇಸಾಯಿ ದೇವರಗೊನಾಲ, ಬೀರಲಿಂಗ ಬಾದ್ಯಾಪುರ, ಗೋಪಾಲ ದಾಸ ಲಡ್ಡಾ, ಸೂಗುರೇಶ ವಾರದ, ಅಬ್ದುಲ್ ಅಲೀಮ್ ಗೋಗಿ, ಭೀಮನಗೌಡ ಲಕ್ಷ್ಮೀ ಹೆಮನೂರ, ವೆಂಕಟೇಶ ಹೊಸಮನಿ, ಗುಂಡಪ್ಪ ಸೋಲಾಪುರ, ಬಾಪು ಗೌಡ ಹುಣಸಗಿ, ದುರ್ಗಪ್ಪ ಗೋಗಿಕೇರಾ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಮುಖಂಡ ಮಾನಪ್ಪ ಸೂಗೂರ ನಿರೂಪಿಸಿ ವಂದಿಸಿದರು.







