ಸುರಪುರ | ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತ : ಹಲವರಿಗೆ ಗಾಯ

ಸುರಪುರ : ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಹೆದ್ದಾರಿಯಿಂದ ಪಕ್ಕಕ್ಕೆ ಇಳಿದು ಅಪಘಾತಕ್ಕೀಡಾದ ಘಟನೆ ತಾಲೂಕಿನ ದೇವಪುರ ಗ್ರಾಮದ ಬಳಿ ನಡೆದಿದೆ.
ದಾವಣಗೆರೆಯಿಂದ ಕಲಬುರಗಿ ಕಡೆಗೆ ತೆರಳುತ್ತಿದ್ದ ಕಲಬುರಗಿ ಬಸ್ ಘಟಕ ಸಂಖ್ಯೆ-3ರ ಬಸ್ ವೇಗವಾಗಿ ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಬಸ್‌ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದು, ಅನೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸುರಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ನಿರ್ವಾಹಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಅಪಘಾತದ ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ, ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಖಾಸಗಿ ಸ್ಲೀಪರ್ ಕೋಚ್ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಒಂಬತ್ತು ಮಂದಿ ಸಜೀವ ದಹನವಾಗಿದ್ದ ಘಟನೆ ಜನರ ಮನಸಿನಿಂದ ಮಾಸುವ ಮುನ್ನವೇ ಮತ್ತೊಂದು ಬಸ್ ಅಪಘಾತ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ರಸ್ತೆ ಇಕ್ಕಟ್ಟಾಗಿರುವುದರಿಂದ ಇಂತಹ ಅಪಘಾತಗಳು ಹೆಚ್ಚುತ್ತಿವೆ. ಆದ್ದರಿಂದ ಕೂಡಲೇ ರಸ್ತೆ ಕಾಮಗಾರಿಯನ್ನು ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






