ಸುರಪುರ | ದೇವಾಪುರದಲ್ಲಿ 9.66 ಕೋಟಿ ರೂ. ವೆಚ್ಚದ ನಿರಂತರ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ

ಸುರಪುರ: ಪ್ರತಿಯೊಬ್ಬರಿಗೂ ಶುದ್ಧ ಹಾಗೂ ನಿರಂತರ ಕುಡಿಯುವ ನೀರು ಒದಗಿಸುವುದು ಸರ್ಕಾರ ಮತ್ತು ಜನಪ್ರತಿನಿಧಿಯಾಗಿ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ತಾಲೂಕಿನ ದೇವಾಪುರ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ನಿರ್ಮಿಸಲಾದ ಮನೆ-ಮನೆಗೆ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಜಲವೇ ಜೀವನ. ಶುದ್ಧ ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ‘ಜಲ ಅರ್ಪಣ ದಿವಸ’ದ ಸಂದರ್ಭದಲ್ಲಿ ದೇವಾಪುರ ಗ್ರಾಮಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಲೋಕಾರ್ಪಣೆಗೊಳಿಸಿರುವುದು ಸಂತಸದ ಸಂಗತಿಯಾಗಿದೆ. ಇನ್ನು ಮುಂದೆ ಗ್ರಾಮಸ್ಥರ ಮನೆಗಳಿಗೆ ನಿರಂತರವಾಗಿ ಶುದ್ಧ ನೀರು ಪೂರೈಕೆಯಾಗಲಿದೆ” ಎಂದು ಹೇಳಿದರು.
ಸುರಪುರ ಕ್ಷೇತ್ರದ ಪ್ರತಿಯೊಂದು ಗ್ರಾಮವೂ ಅಭಿವೃದ್ಧಿಯ ಪಥದಲ್ಲಿ ಸಾಗಬೇಕು. ಗ್ರಾಮೀಣ ಭಾಗದ ಮಹಿಳೆಯರು ನೀರಿಗಾಗಿ ಅನುಭವಿಸುತ್ತಿದ್ದ ಸಂಕಷ್ಟವನ್ನು ತಾವು ಹತ್ತಿರದಿಂದ ಕಂಡಿದ್ದು, ಈ ಯೋಜನೆಯಿಂದ ದೇವಾಪುರದ ಪ್ರತಿಯೊಂದು ಕುಟುಂಬಕ್ಕೂ ಸುರಕ್ಷಿತ ಹಾಗೂ ಶುದ್ಧ ಕುಡಿಯುವ ನೀರು ಲಭ್ಯವಾಗಲಿದ್ದು, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
ಯೋಜನೆಯನ್ನು ಗ್ರಾಮಸ್ಥರು ತಮ್ಮ ಆಸ್ತಿಯಂತೆ ಕಾಪಾಡಿಕೊಳ್ಳಬೇಕು. ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಿದ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತಾಲೂಕು ಪಂಚಾಯಿತಿ, ದೇವಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಹಕರಿಸಿದ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಣಮಂತ್ರಾಯ ಪಾಟೀಲ್ ಮಾತನಾಡಿ, ಜಲ ಜೀವನ ಮಿಷನ್ ಯೋಜನೆಯಡಿ 9.66 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ದೇವಾಪುರ ಗ್ರಾಮದ 965 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ತಾ.ಪಂ ಇಓ ಬಸವರಾಜ ಸಜ್ಜನ್, ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ವೆಂಕೋಬ ಯಾದವ್,ಮಲ್ಲಣ್ಣ ಸಾಹುಕಾರ ನರಸಿಂಗಪೇಟ,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






