ಸುರಪುರ | ಗರ್ಭಕೋಶ ಕ್ಯಾನ್ಸರ್ ತಡೆಗೆ ಹೆಚ್‌ಪಿವಿ ಲಸಿಕೆ ಪಡೆಯಿರಿ: ಶಾಸಕ ರಾಜಾ ವೇಣುಗೋಪಾಲ ನಾಯಕ

ಸುರಪುರ: 14 ವರ್ಷ ಮೇಲ್ಪಟ್ಟ ಬಾಲಕಿಯರು ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಸರ್ಕಾರ ನೀಡುತ್ತಿರುವ HPV ಲಸಿಕೆ ಅನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಸಲಹೆ ನೀಡಿದರು.
ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಗರ್ಭಕೋಶ ಕ್ಯಾನ್ಸರ್ ಅಪಾಯಕಾರಿ ರೋಗವಾಗಿದ್ದು, ಅದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಈ ಲಸಿಕೆಯನ್ನು ನೀಡುತ್ತಿದೆ. ಆದ್ದರಿಂದ 14 ವರ್ಷ ಮೇಲ್ಪಟ್ಟ ಎಲ್ಲಾ ಬಾಲಕಿಯರು ಲಸಿಕೆ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜಾ ವೆಂಕಟಪ್ಪ ನಾಯಕ್, ಗರ್ಭಕೋಶ ಕ್ಯಾನ್ಸರ್ ತಡೆಗಟ್ಟಲು ಸರ್ಕಾರ ನೀಡುತ್ತಿರುವ ಈ ಲಸಿಕೆ ಬಹಳ ಅಮೂಲ್ಯವಾಗಿದೆ. ಇತರ ಲಸಿಕೆಗಳಿಗಿಂತ ಇದು ಹೆಚ್ಚಿನ ದರದ ಲಸಿಕೆಯಾಗಿದ್ದು, 14 ರಿಂದ 15 ವರ್ಷದೊಳಗಿನ ಬಾಲಕಿಯರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆ ನೀಡಲಾಗುತ್ತಿದೆ. ಗ್ರಾಮಗಳ ವ್ಯಾಪ್ತಿಯ ಜನರು ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯುವಂತೆ ಅವರು ಮನವಿ ಮಾಡಿದರು.
ಸುರಪುರ ಮತ್ತು ಹುಣಸಗಿ ತಾಲೂಕುಗಳಲ್ಲಿ ಒಟ್ಟು 4,750 ಬಾಲಕಿಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ ಸುಮಾರು 300 ಬಾಲಕಿಯರಿಗೆ ಲಸಿಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಪ್ಪ ಕಾಡ್ಲೂರ, ಮುಖಂಡರಾದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಮಲ್ಲಣ್ಣ ಸಾಹುಕಾರ್ ಮುಧೋಳ, ಅಬ್ದುಲ್ ಗಫರ್ ನಗನೂರಿ, ಶಕೀಲ್ ಅಹ್ಮದ್ ಖುರೇಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಾಲಕಿಯರಿಗೆ ಲಸಿಕೆಯನ್ನು ಕೂಡ ಹಾಕಲಾಯಿತು.







