ಸುರಪುರ | ವಿದ್ಯಾರ್ಥಿಗಳಿಗೆ ಕರಕುಶಲ ಕಲೆಗಳ ಪ್ರಾತ್ಯಕ್ಷಿಕೆ, ಜಾಗೃತಿ ಕಾರ್ಯಕ್ರಮ
ಮಕ್ಕಳು ಕಲಿಕೆಯ ಜೊತೆಗೆ ಕೌಶಲ್ಯ ಬೆಳೆಸಿಕೊಳ್ಳಿ : ಪ್ರಕಾಶ ಅಂಗಡಿ

ಸುರಪುರ: ತಾಲೂಕಿನ ತಳವಾರಗೇರ ಗ್ರಾಮದ ವೀರತಪಸ್ವಿ ಶ್ರೀ ಚನ್ನವೀರ ಶಿವಾಚಾರ್ಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕರಕುಶಲ ಇಲಾಖೆ ಧಾರವಾಡ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕರಕುಶಲ ಕಲೆಗಳ ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಕಲಿಕೆಯ ಜೊತೆಗೆ ಮಕ್ಕಳು ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ್ ವಿ.ಎನ್., ವಿದ್ಯಾರ್ಥಿಗಳಲ್ಲಿ ಭಾರತದ ಸಾಂಪ್ರದಾಯಿಕ ಕರಕುಶಲ ಕಲೆಗಳ ಕುರಿತು ಅರಿವು ಮೂಡಿಸುವುದು, ಕರಕುಶಲ ಕಲೆಗಳ ಮಹತ್ವವನ್ನು ಪರಿಚಯಿಸುವುದು ಹಾಗೂ ಮುಂದಿನ ಪೀಳಿಗೆಯಲ್ಲಿ ಕರಕುಶಲ ಪರಂಪರೆಯ ಬಗ್ಗೆ ಆಸಕ್ತಿ ಬೆಳೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಶಾಲೆಯ ಪ್ರಧಾನ ಗುರು ವಾಸುದೇವ ಅರಸಿಕೆರೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆರು ವಿವಿಧ ಕರಕುಶಲ ಕಲೆಗಳ ನೇರ ಪ್ರಾತ್ಯಕ್ಷಿಕೆ ನೀಡಲಾಯಿತು. ಕರಕುಶಲ ಕಲಾವಿದರು ತಮ್ಮ ಕಲೆಯ ವಿಶೇಷತೆ, ತಯಾರಿಕಾ ವಿಧಾನ ಹಾಗೂ ಕಲೆಗಳ ಪರಂಪರೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಗಾಯತ್ರಿ ಸಿ. ಶಿಲ್ಪಿ ಅವರು ಕಲ್ಲು ಕೆತ್ತನೆ ಕಲೆಯ ಪ್ರಾತ್ಯಕ್ಷಿಕೆ ನೀಡಿದರು. ಶ್ರೀವಿದ್ಯಾ ಅವರು ಗ್ಲಾಸ್ ಪೇಂಟಿಂಗ್ ಕಲೆಯ ಪ್ರಾತ್ಯಕ್ಷಿಕೆ ನೀಡಿ, ಗಾಜಿನ ಮೇಲೆ ವಿವಿಧ ವಿನ್ಯಾಸಗಳನ್ನು ಮೂಡಿಸುವ ವಿಧಾನವನ್ನು ಪರಿಚಯಿಸಿದರು. ಮಗ್ಗೆಮ್ಮ ವಿಶ್ವಕರ್ಮ ಅವರು ಮರದ ಕೆತ್ತನೆ ಕಲೆಯ ಕುರಿತು ಹಾಗೂ ಗಂಗೇಶ್ವರಿ ಬಡಿಗೇರ ಅವರು ಮೇಣದ ಕಲಾಕೃತಿಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ರಮೇಶ ಬಡಿಗೇರ ಅವರು ಕಂಚಿನ ಉಬ್ಬು ಶಿಲ್ಪ ಕಲೆಯ ಪ್ರಾತ್ಯಕ್ಷಿಕೆ ನೀಡಿದರು.
ಪ್ರಶಾಂತ್ ಶಹಾಪುರ ಅವರು ಮಣ್ಣಿನ ಅಚ್ಚು ಹಾಗೂ ಮಣ್ಣಿನ ಮಾದರಿ ತಯಾರಿಕೆ ಕಲೆಯ ಪ್ರಾತ್ಯಕ್ಷಿಕೆ ನೀಡಿದರು. ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಲಾವಿದರೊಂದಿಗೆ ಸಂವಾದ ನಡೆಸಿ, ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಬಳಸುವ ವಿವಿಧ ಸಾಮಗ್ರಿಗಳು, ಉಪಕರಣಗಳು ಹಾಗೂ ತಂತ್ರಗಳ ಕುರಿತು ಮಾಹಿತಿ ಪಡೆದರು.
ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಕರಕುಶಲ ಕಲೆಗಳ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಕರಕುಶಲ ಕಲೆಗಳಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಸ್ಪರ್ಧೆಗಳಲ್ಲಿ ಭಾಗವಹಿಸಿದ ಹಾಗೂ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ನೀಡಿದ ಕರಕುಶಲ ಕಲಾವಿದರನ್ನು ಸನ್ಮಾನಿಸಿ, ಅವರ ಕಲಾ ಸೇವೆಯನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಭಾರತದ ಸಾಂಪ್ರದಾಯಿಕ ಕರಕುಶಲ ಕಲೆಗಳ ವೈವಿಧ್ಯತೆ, ಅವುಗಳ ಸಾಂಸ್ಕೃತಿಕ ಮಹತ್ವ ಹಾಗೂ ಕರಕುಶಲ ಕಲೆಗಳ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ವರ್ಗಾಯಿಸುವ ಅಗತ್ಯತೆಯ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಟಿ.ಎಚ್. ಪಾಟೀಲ್, ಹನುಮಂತರಾಯ ಯಾದವ, ಮಲ್ಲನಗೌಡ ಪಾಟೀಲ, ದೇವೇಂದ್ರಪ್ಪ ರಂಗಂಪೇಟ, ಹೇಮಲತಾ ತಳವಾರಗೇರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.






