ಸುರಪುರ | ರಸ್ತೆ ಅಗೆದು ಹಾಗೆಯೇ ಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆ : ಬಸವರಾಜ ಹಾದಿಮನಿ

ಸುರಪುರ: ದೇವಾಪುರ ಕ್ರಾಸ್ನಿಂದ ದೇವತ್ಕಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಪೈಪ್ಲೈನ್ ಅಳವಡಿಕೆಗಾಗಿ ರಸ್ತೆಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಬಸವರಾಜ ಹಾದಿಮನಿ ಎಚ್ಚರಿಸಿದರು.
ಸಂಘಟನೆಯ ನೇತೃತ್ವದಲ್ಲಿ ಹೆದ್ದಾರಿಯ ಹಂದ್ರಾಳ ಎಸ್.ಡಿ. ಕ್ರಾಸ್ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಪ್ರತಿದಿನ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣವೇ ರಸ್ತೆಯನ್ನು ಮರು ಡಾಂಬರೀಕರಣಗೊಳಿಸಬೇಕು. ರಸ್ತೆ ಅಗೆದು ಹಾಗೆಯೇ ಬಿಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಉಪವಿಭಾಗದ ಕಚೇರಿ ಸಿಬ್ಬಂದಿ ಹಾಗೂ ಆರಕ್ಷಕ ನಿರೀಕ್ಷಕ ಉಮೇಶ್ ಎಂ. ನಾಯಕ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾದಿಗ ದಂಡೋರ ಸಂಘಟನೆಯ ಪದಾಧಿಕಾರಿಗಳಾದ ಭೀಮರಾಯ ದೇವತ್ಕಲ್, ಲಕ್ಷ್ಮಣ ಆಲ್ದಾಳ, ಈಶ್ವರ ಸತ್ಯಂಪೇಟ, ಮಲ್ಲು ಎಚ್. ಹುಲಿಮನಿ, ಅಂಬರೀಶ ಮ್ಯಾಗೇರಿ, ಮಲ್ಲಿಕಾರ್ಜುನ್ ವಾಗನಗೇರಿ, ರವಿಕುಮಾರ್ ವಾಗಣಗೇರಿ, ಚಂದ್ರಕಾಂತ್ ಗೌಡ ಹಂದ್ರಾಳ, ಶಿವರಾಜ್ ಗೌಡ ಹಂದ್ರಾಳ, ಬಿ.ಸಿ. ಪಾಟೀಲ್ ನಾಗರಾಳ್, ಹುಲುಗಪ್ಪ ದೇವತ್ಕಲ್, ದುರ್ಗಪ್ಪ ಬಡಿಗೇರ್, ಹನುಮಂತ ನಾಗರಾಳ್, ಸದೇವಪ್ಪ ಬೆಣ್ಣಿ, ಮಹೇಶ್ ಕುಮಾರ್, ಪರಮಪ್ಪ ಗುಡಿಮನಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.






