ಸುರಪುರ | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಅರಿವು

ಸುರಪುರ: ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳಾ ದಿನಾಚರಣೆ ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಡಿಪಿಓ ಲಾಲ್‌ಸಾಬ್ ಪಿರಾಪುರ್ ಮಾತನಾಡಿ, ಮಹಿಳೆಯರು ಇನ್ನೂ ಸಂಪೂರ್ಣ ಸಬಲರಾಗಿಲ್ಲ ಮತ್ತು ತಮ್ಮ ಹಕ್ಕುಗಳನ್ನು ಸಂಪೂರ್ಣವಾಗಿ ಪಡೆದುಕೊಂಡಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಲು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಮಹಿಳೆಯರು ಕ್ರೀಡೆ, ಶಿಕ್ಷಣ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ ಲಿಂಗ ತಾರತಮ್ಯ, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಬಾಲ್ಯ ವಿವಾಹದಂತಹ ಸಮಸ್ಯೆಗಳು ಇನ್ನೂ ಸಮಾಜದಲ್ಲಿ ನಡೆಯುತ್ತಿವೆ. ಪುರುಷರ ಮನೋಭಾವ ಬದಲಾಗಿದಾಗ ಮಾತ್ರ ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿತು ಸಂಪೂರ್ಣ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕ ಅಧ್ಯಕ್ಷ ಬೆರಲಿಂಗ ಬದ್ಯಾಪುರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ವಿಶೇಷವಾಗಿ ಗೃಹ ಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ ಕರ್ನಾಟಕ, ಗೃಹ ಜ್ಯೋತಿ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆ ಯೋಜನೆಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಅಧಿಕಾರಿ ನಿಂಗಮ್ಮ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪಂಚ ಗ್ಯಾರಂಟಿ ಸಮಿತಿ ಸದಸ್ಯ ಪಾರಪ್ಪ ದೇವತ್ಕಲ್, ಜೆಸ್ಕಾಂ ಎಇಇ ರಫೀಕ್, ತಾ.ಪಂ ವ್ಯವಸ್ಥಾಪಕ ನಾಗರಾಜ,ಶರಣಗೌಡ,ವೈದ್ಯರಾದ ರೂಪಾ, ಮಹಿಳಾ ಮೇಲ್ವಿಚಾರಕಿಯರಾದ ಗುರುದೇವಿ ಹಿರೇಮಠ, ಸಂಗಮ್ಮ, ಪದ್ಮಾವತಿ ಡಿ.ನಾಯಕ, ಚಂದ್ರ ಲೀಲಾ, ಸಿದ್ದಮ್ಮ ಜಾನಕಿ, ಶಿಕ್ಷಣ ಇಲಾಖೆಯ ಸೋಮಶೇಖರ ಉಪಸ್ಥಿತರಿದ್ದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ತಾಲೂಕು ಮಟ್ಟದ ಕ್ರೀಡೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸುರೇಖಾ, ಮಮತಾ,ಅನುರಾಧಾ, ಅಕ್ಷತಾ, ಮಂಜುಳಾ,ತಬಸುಮಾ,ಸಾವಿತ್ರಿ,ಸರಣಿಯಾ, ಜಯಶ್ರೀ ಬಿರಾದಾರ,ಶಶಿಕಲಾ ಗಾಳಿ, ಸಾವಿತ್ರಿ ಗಾಳಿ, ಹಾಗೊಮ್ಮೆ, ಸರೋಜಾ, ಲಕ್ಷ್ಮೀ, ಪ್ರಮೀಳಾ, ಹುಲಗಮ್ಮ, ಮಂಜುಳಾ, ನಾಗಮ್ಮ, ಕಮಲ ಇವರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಇದೇ ಸಂದರ್ಭದಲ್ಲಿ ಸಿಡಿಪಿಓ ಕಚೇರಿಯಲ್ಲಿ ಮೇಲ್ವಿಚಾರಕರಾಗಿದ್ದು ಈಗ ಭಡ್ತಿ ಹೊಂದಿ ಅಧೀಕ್ಷಕರಾದ ಭೀಮಾಶಂಕರ ನಾಯಕಗೆ ಸನ್ಮಾನಿಸಲಾಯಿತು.ಗುರುದೇವಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಕವಿತಾ ಪತ್ತಾರ ಪ್ರಾರ್ಥಿಸಿದರು,ಸಿದ್ದಮ್ಮ ಸ್ವಾಗತಿಸಿದರು, ಸಾವಿತ್ರಿ ಗಾಳಿ ನಿರೂಪಿಸಿ ವಂದಿಸಿದರು.







