ಸುರಪುರ | ನೀರು ಸರಬರಾಜು ಪೈಪ್ ದುರಸ್ಥಿ ಸ್ಥಳಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ

ಸುರಪುರ : ತಾಲೂಕಿನ ಹಾವಿನಾಳ ಗ್ರಾಮದ ಬಳಿ ಸುರಪುರ ನಗರಕ್ಕೆ ನೀರು ಸರಬರಾಜು ಮಾಡುವ ಪೈಪ್ ಒಡೆದು ನೀರು ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ ನೀಡಿ, ಪರಿಶೀಲಿಸಿದರು.
ಕಾಮಗಾರಿಯ ಸ್ಥಿತಿಗತಿ ಕುರಿತು ಶಾಸಕರು ಅಧಿಕಾರಿಗಳಿಂದ ಮಾಹಿತಿ ಪಡೆದರು. ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿ ಶಂಕರಗೌಡ ಮಾತನಾಡಿ, ಹಳ್ಳದಲ್ಲಿ ನೀರಿನ ಒತ್ತಡ ಹೆಚ್ಚಾದ ಕಾರಣ ಪೈಪ್ ಹೊಡೆದಿತ್ತು, ಈಗ ದುರಸ್ತಿ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಕೆಲವು ದಿನಗಳ ಹಿಂದೆ ಪೈಪ್ ಸೋರಿಕೆಯಾಗಿ ನೀರು ಸರಬರಾಜು ನಿಂತಿರುವ ಮಾಹಿತಿ ತಿಳಿದ ತಕ್ಷಣ ದುರಸ್ತಿಗೆ ಸೂಚನೆ ನೀಡಲಾಗಿತ್ತು. ಈಗ ಸಮಸ್ಯೆ ಪರಿಹಾರವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಅವರು ಕಾಮಗಾರಿ ಪ್ರಕ್ರಿಯೆ ಮತ್ತು ಕ್ರಿಯಾಯೋಜನೆ ಕುರಿತು ಸಮಗ್ರ ಮಾಹಿತಿ ಹಾಗೂ ದಾಖಲೆಗಳನ್ನು ಪಡೆಯಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ), ನಗರ ನೀರು ಸರಬರಾಜು ಇಲಾಖೆಯ ಸಹಾಯಕ ಅಭಿಯಂತರ ಶಂಕರಗೌಡ, ನಗರಸಭೆ ಪೌರಾಯುಕ್ತ ಬಸವರಾಜ ಟಣಕೆದಾರ, ಜುಮ್ಮಣ್ಣ ಕೆಂಗುರಿ, ನಾಸಿರ್ ಕುಂಡಾಲೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ, ನಗರಸಭೆ ಎಇಇ ಶಾಂತಪ್ಪ, ಮುಖಂಡ ಶಕೀಲ್ ಅಹಮದ್ ಖುರೇಷಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಹಣಮಂತ್ರಾಯ ಪಾಟೀಲ್ ಸೇರಿ ಅನೇಕರಿದ್ದರು.







