ಸುರಪುರ | ಸೆ.19ರಂದು ರಾಷ್ಟ್ರೀಯ ಲೋಕ ಅದಾಲತ್: ನ್ಯಾ.ಯಮನಪ್ಪ ಬಮ್ಮಣಗಿ

ಸುರಪುರ: ರಾಷ್ಟ್ರೀಯ ಲೋಕ ಅದಾಲತ್ ಪ್ರಕರಣಗಳ ಇತ್ಯರ್ಥಕ್ಕೆ ಅತ್ಯಂತ ಉಪಯುಕ್ತವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಸುರಪುರ ಪೀಠದ ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಯಮನಪ್ಪ ಬಮ್ಮಣಗಿ ಹೇಳಿದರು.
ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆ.12ರಂದು ನಡೆಯಬೇಕಿದ್ದ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಸೆ.19ರಂದು ನಡೆಸಲಾಗುವುದು. ಲೋಕ ಅದಾಲತ್ ಮೂಲಕ ಕೌಟುಂಬಿಕ ವ್ಯಾಜ್ಯಗಳು, ಸಹೋದರ-ಸಹೋದರಿಯರ ನಡುವಿನ ಆಸ್ತಿ ವ್ಯಾಜ್ಯಗಳು, ಭೂ ವ್ಯಾಜ್ಯ, ಆಸ್ತಿ ವಿಭಜನೆ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಗಂಡ-ಹೆಂಡತಿ ನಡುವಿನ ವ್ಯಾಜ್ಯಗಳು, ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣಗಳು, ವೈವಾಹಿಕ ಪುನಶ್ಚೇತನ ಅರ್ಜಿಗಳು, ಅಪಘಾತ ವಿಮಾ ಪರಿಹಾರ ಹಾಗೂ ರಸ್ತೆ ಅಪಘಾತ ಪ್ರಕರಣಗಳು, ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ರಾಜಿ ಮೂಲಕ ಪರಿಹರಿಸಿಕೊಳ್ಳಬಹುದು ಎಂದರು.
ಈ ಹಿಂದೆ ಜಿಲ್ಲೆಯಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಸುರಪುರ ನ್ಯಾಯಾಲಯವು ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನ ಪಡೆದಿದೆ. ಸೆ.19ರಂದು ನಡೆಯಲಿರುವ ಲೋಕ ಅದಾಲತ್ ಕುರಿತು ನಗರದಲ್ಲಿ ನಗರಸಭೆಯ ವಾಹನಗಳ ಮೂಲಕ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ವಾಹನಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ದೂರುದಾರರು ಹಾಗೂ ಪಕ್ಷಗಾರರಿಗೆ ಮಾಹಿತಿ ನೀಡಬೇಕು. ಇದರಿಂದ ಹೆಚ್ಚಿನ ಜನರು ತಮ್ಮ ವ್ಯಾಜ್ಯಗಳನ್ನು ರಾಜಿ ಮೂಲಕ ಪರಿಹರಿಸಿಕೊಳ್ಳಲು ಅನುಕೂಲವಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಫಕೀರವ್ವ ಕೆಳಗೇರಿ ಮಾತನಾಡಿ, ಸೆ.19ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳನ್ನೂ ಇತ್ಯರ್ಥಪಡಿಸಬಹುದು. ಜನನ ಪ್ರಮಾಣಪತ್ರ ಪಡೆಯಲು ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಬಿಲ್ ಬಾಕಿ ಪ್ರಕರಣಗಳು, ವಾಹನ ಸವಾರರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು, ಆಸ್ತಿ ಖರೀದಿ ಕರಾರು ಪತ್ರಗಳಿಗೆ ಸಂಬಂಧಿಸಿದ ವ್ಯಾಜ್ಯಗಳು ಹಾಗೂ ಬ್ಯಾಂಕ್ ಸಾಲ ಮರುಪಾವತಿ ಕುರಿತ ಪ್ರಕರಣಗಳನ್ನು ಸಹ ಪರಿಹರಿಸಿಕೊಳ್ಳಲು ಅವಕಾಶವಿದೆ ಎಂದರು.
ಸಾರ್ವಜನಿಕರು ತಮ್ಮ ವ್ಯಾಜ್ಯಗಳ ನೋಂದಣಿಗಾಗಿ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಅಲ್ಲದೆ ಸಲಹಾ ಪೆಟ್ಟಿಗೆಯ ಮೂಲಕವೂ ತಮ್ಮ ವ್ಯಾಜ್ಯಗಳ ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಿವಾಣಿ ನ್ಯಾಯಾಧೀಶರಾದ ಕೆ.ಎಂ ಪಾಟೀಲ, ಮುದುಕಪ್ಪ ಓದನ್ ಉಪಸ್ಥಿತರಿದ್ದರು.






