ಸುರಪುರ | ಕನ್ಹೇರಿ ಸ್ವಾಮಿ ಪ್ರವೇಶಕ್ಕೆ ವಿರೋಧ: ದಸಂಸ ಕ್ರಾಂತಿಕಾರಿ ಬಣದಿಂದ ಪ್ರತಿಭಟನೆ ಎಚ್ಚರಿಕೆ

ಸುರಪುರ: ಸೆಪ್ಟೆಂಬರ್ 27ರಂದು ಕಲಬುರಗಿಯಲ್ಲಿ ನಡೆಯಲಿರುವ ಹಿಂದೂ ಸಮಾವೇಶಕ್ಕೆ ಕನ್ಹೇರಿ ಸ್ವಾಮಿಗಳು ಆಗಮಿಸುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಪ್ರತಿಭಟನೆ ನಡೆಸುವುದಾಗಿ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾವೇಶದ ಹೆಸರಿನಲ್ಲಿ ಬಸವಣ್ಣ ಹಾಗೂ ಬಸವಾದಿ ಶರಣರ ವಿಚಾರಧಾರೆಗೆ ಅವಮಾನವಾಗುತ್ತಿದೆ ಎಂಬ ಆರೋಪವನ್ನು ಮಾಡಿದರು. ಲಿಂಗಾಯತ ಧರ್ಮದ ಕುರಿತು ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ, ಸಮಾವೇಶವನ್ನು ವಿರೋಧಿಸುವುದಾಗಿ ಹೇಳಿದರು.
ಈ ಸಂಬಂಧ ಸೆಪ್ಟೆಂಬರ್ 25ರಂದು ಕಲಬುರಗಿಯ ಕನ್ನಡ ಭವನದಿಂದ ಜಗತ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸೆಪ್ಟೆಂಬರ್ 27ರಂದು ಕನ್ಹೇರಿ ಸ್ವಾಮಿಗಳು ಕಲಬುರಗಿಗೆ ಆಗಮಿಸುವ ಪ್ರಯತ್ನ ಮಾಡಿದರೆ, ನಗರದ ಪ್ರಮುಖ ವೃತ್ತಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಲಿಂಗಾಯತ ಮಠಾಧೀಶರು, ಪ್ರಗತಿಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಹಾಗೂ ಕೃಷಿ ಕಾರ್ಮಿಕ ಸಂಘಟನೆಗಳು ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಮುಖಂಡ ಮಾನು ಗುರಿಕಾರ ಮಾತನಾಡಿ, ಲಿಂಗಾಯತ ಧರ್ಮದ ಸ್ವತಂತ್ರ ಅಸ್ತಿತ್ವವನ್ನು ಉಳಿಸಬೇಕು ಎಂಬುದು ತಮ್ಮ ಸಂಘಟನೆಯ ನಿಲುವು ಎಂದು ಹೇಳಿದರು. ಬಸವಾದಿ ಶರಣರ ವಿಚಾರಧಾರೆಯನ್ನು ಉಳಿಸಿ ಬೆಳೆಸಲು ಎಲ್ಲ ಶೋಷಿತ ಸಮುದಾಯಗಳು ಹಾಗೂ ಸಂಘಟನೆಗಳು ಒಂದಾಗಿ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಜೀಜ್ ಸಾಬ್ ಐಕೂರು, ತಾಲೂಕು ಸಂಚಾಲಕ ಬಸವರಾಜ ದೊಡ್ಡಮನಿ, ಚಂದ್ರಶೇಖರ ಕಟ್ಟಿಮನಿ, ಸಿದ್ದಣ್ಣ ಸುರಪುರಕರ್, ರಾಮಣ್ಣ ಶೆಳ್ಳಗಿ, ಖಾಜಾ ಹುಸೇನ್ ಗುಡಗುಂಟಿ, ಆನಂದ ಕಟ್ಟಿಮನಿ, ಬಾಲು ಗುಂಡಗುರ್ತಿ, ರಾಮಪ್ಪ ಬಿಜಾಸಪೂರ, ಬಸವರಾಜ್ ಬೊಮ್ಮನಹಳ್ಳಿ, ಮಹೇಶ್ ಸುಂಗಲಕರ್ ಉಪಸ್ಥಿತರಿದ್ದರು.






