ಸುರಪುರ | ಎಂಎಸ್‌ಐಎಲ್ ಮದ್ಯದಂಗಡಿಗೆ ವಿರೋಧ; ಡಿಎಸ್ಎಸ್‌ನಿಂದ ಪ್ರತಿಭಟನೆ ಎಚ್ಚರಿಕೆ

ಸುರಪುರ: ಪಟ್ಟಣದ ಕುಂಬಾರಪೇಟೆಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಸಮೀಪ ಎಂಎಸ್‌ಐಎಲ್ ಮದ್ಯದಂಗಡಿ ಆರಂಭಿಸಿದರೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮುಖಂಡರು, ವಾರ್ಡ್ ಸಂಖ್ಯೆ 1 ಮತ್ತು 2ರ ವ್ಯಾಪ್ತಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಹಾಗೂ ಅಂಬಿಗರ ಚೌಡಯ್ಯ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳು, ಶಾಲೆಗಳು ಮತ್ತು ದೇವಸ್ಥಾನಗಳಿರುವ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗಿದೆ ಎಂಬ ಮಾಹಿತಿ ದೊರೆತಿದೆ ಎಂದು ಹೇಳಿದರು.
ಇಂತಹ ಜನನಿಬಿಡ ಹಾಗೂ ಶೈಕ್ಷಣಿಕ ಮತ್ತು ಧಾರ್ಮಿಕ ಕೇಂದ್ರಗಳ ಸಮೀಪ ಮದ್ಯದಂಗಡಿ ಆರಂಭಿಸುವ ನಿರ್ಧಾರವನ್ನು ಕೂಡಲೇ ರದ್ದುಗೊಳಿಸಬೇಕು. ಮದ್ಯದಂಗಡಿ ಆರಂಭವಾದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದ್ದು, ಯಾವುದೇ ಅಹಿತಕರ ಘಟನೆ ನಡೆದರೆ ಅದರ ಹೊಣೆ ಸರ್ಕಾರದ್ದಾಗಲಿದೆ ಎಂದು ಆರೋಪಿಸಿದರು.
ಈ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಎಂಎಸ್‌ಐಎಲ್ ಮದ್ಯದಂಗಡಿ ಆರಂಭಿಸಬಾರದು. ಸರ್ಕಾರ ತಮ್ಮ ಮನವಿಗೆ ಸ್ಪಂದಿಸದಿದ್ದರೆ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಗೋಪಾಲ ವಜ್ಜಲ, ತಾಲೂಕು ಸಂಚಾಲಕ ಹನುಮಂತ ಭದ್ರಾವತಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಬಳಿಕ ಜಿಲ್ಲಾಧಿಕಾರಿಗೆ ಉದ್ದೇಶಿಸಿದ ಮನವಿಯನ್ನು ತಹಸೀಲ್ದಾರ್ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಕೀಲ ವೆಂಕಟೇಶ ನಾಯಕ, ಮುಖಂಡರಾದ ಬಸವರಾಜ ಚಿಂಚೋಳಿ, ಶಿವಶರಣ ಯಾಳಗಿ, ಶಿವಪ್ಪ ಕಂಬಾರ, ಮಂಜುನಾಥ ಕೊಂಬೀನ್, ಹಣಮಂತ ಬಾಂಬೆ, ಗೋಪಾಲ ಛಲವಾದಿ, ಗೋಪಾಲ ಬಾಗಲಕೋಟೆ, ಪಿಡ್ಡ ನಾಯಕ ಕುಂಬಾರಪೇಟ, ಸೇರಿದಂತೆ ಇತರರು ಭಾಗವಹಿಸಿದ್ದರು.






