ಸುರಪುರ | ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಆಗ್ರಹಿಸಿ ದೇವಿಕೇರಾ ಗ್ರಾಮಸ್ಥರ ಪ್ರತಿಭಟನೆ

ಸುರಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬಣದ ನೇತೃತ್ವದಲ್ಲಿ ದೇವಿಕೇರಾ ಗ್ರಾಮಸ್ಥರು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ತಾಲೂಕಿನ ದೇವಿಕೇರಾ ಗ್ರಾಮದ ಸರ್ವೇ ನಂಬರ್ 30/ಅರಲ್ಲಿರುವ ಸರ್ಕಾರಿ ಜಮೀನಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳಿಗೆ ಸರ್ಕಾರದಿಂದ ಮಂಜೂರಾದ ಮೂರು ಎಕರೆ ಭೂಮಿಯನ್ನು ಹೊರತುಪಡಿಸಿ, ಉಳಿದ 4 ಎಕರೆ 12 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡು ತಂತಿಬೇಲಿ ಹಾಕಲಾಗಿದೆ. ಇದು ಕಾನೂನು ಉಲ್ಲಂಘನೆಯಾಗಿದೆ. ಕೂಡಲೇ ಸರ್ಕಾರ ಒತ್ತುವರಿಯಾಗಿರುವ ಜಮೀನನ್ನು ವಶಕ್ಕೆ ಪಡೆದು ಸಾರ್ವಜನಿಕ ಬಳಕೆಗೆ ಒದಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಸರ್ಕಾರದಿಂದ ಅನುದಾನ ಬಂದರೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರಿ ಜಮೀನು ಲಭ್ಯವಿಲ್ಲದಂತಾಗಿದೆ. ಸರ್ಕಾರಿ ಜಮೀನನ್ನು ಬಿಟ್ಟುಕೊಡುವಂತೆ ಗ್ರಾಮಸ್ಥರು ಕೇಳಿದರೂ ಅವರ ಮೇಲೆ ದಬ್ಬಾಳಿಕೆ ಹಾಗೂ ದೌರ್ಜನ್ಯ ನಡೆಸಲಾಗುತ್ತಿದೆ. ಖಾಸಗಿ ವ್ಯಕ್ತಿಗಳು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಜಮೀನನ್ನು ತಾಲೂಕು ಆಡಳಿತ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿದಾರರಿಂದ ಬಿಡಿಸಿ, ಗ್ರಾಮಸ್ಥರ ಅನುಕೂಲಕ್ಕಾಗಿ ಬಿಡುಗಡೆ ಮಾಡಬೇಕು ಎಂದು ಈಗಾಗಲೇ ಮನವಿ ಸಲ್ಲಿಸಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಮನವಿಗೆ ಸ್ಪಂದಿಸದ ಕಾರಣ ಪ್ರತಿಭಟನೆ ನಡೆಸಲಾಗುತ್ತಿದೆ. ಬೇಡಿಕೆಗಳ ಕುರಿತು ಲಿಖಿತ ಹಿಂಬರಹ ನೀಡುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
ತಹಶೀಲ್ದಾರರು ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಿದರೂ ಅದು ಫಲಪ್ರದವಾಗಲಿಲ್ಲ. ಬಳಿಕ ಪ್ರತಿಭಟನಾಕಾರರಿಗೆ ಲಿಖಿತ ಹಿಂಬರಹ ನೀಡಲಾಯಿತು. ಗ್ರೇಡ್-2 ತಹಶೀಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಮನವಿ ಸಲ್ಲಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಮಾನಪ್ಪ ಶೆಳ್ಳಗಿ, ಬಸವರಾಜ್ ದೊಡ್ಡಮನಿ ಶೆಳ್ಳಗಿ, ಮಹೇಶ್ ಸುಂಗಲ್ಕರ್, ಆನಂದ ಕಟ್ಟಿಮನಿ, ಮಲ್ಲಿಕಾರ್ಜುನ ವಾಗಣಗೇರ, ದೇವಿಕೇರಾ ಗ್ರಾಮದ ಭಾಗಪ್ಪ ಹೊಸಮನಿ, ಮಹಾದೇವಪ್ಪ ಹೊಸಮನಿ, ನಿಂಗಪ್ಪ ಕಬಾಡಗೇರ, ಗಣಪತಿ ಹೊಸಮನಿ, ರಾಜಶೇಖರ ಅಜ್ಜುಕೊಲಿ, ಚಂದ್ರು ಬಿಲಕಲ್ಲು, ಬಸವರಾಜ್ ಸಿದ್ದಾಪುರ, ದೇವಪ್ಪ, ಶರಣಮ್ಮ, ಪದ್ಮಾವತಿ, ತಿಮ್ಮಮ್ಮ, ನಾಗಮ್ಮ, ರೇಣುಕಮ್ಮ, ಮಾನಮ್ಮ, ಧರೆಯಮ್ಮ, ಹನುಮವ್ವ, ಅಯ್ಯಮ್ಮ, ಲಕ್ಷ್ಮಿ, ಮರಿಯಮ್ಮ, ತಿಪ್ಪಮ್ಮ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.






