ಸುರಪುರ | ಎಸ್‌ಪಿ ಅವರ ವರ್ಗಾವಣೆ ರದ್ದುಗೊಳಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದಿಂದ ಪ್ರತಿಭಟನೆ

ಸುರಪುರ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟ, ಗಾಂಜಾ, ಇಸ್ಪೀಟ್, ಕೋಳಿ ಪಂದ್ಯಾಟದಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿರುವ ಎಸ್ಪಿ ಪೃಥ್ವಿಕ್ ಶಂಕರ ಅವರನ್ನು ವಿನಾಕಾರಣ ವರ್ಗಾಣೆಗೆ ಮುಂದಾಗಿರುವುದು ಖಂಡನೀಯ, ಕೂಡಲೇ ಅವರ ವರ್ಗಾವಣೆ ರದ್ದು ಮಾಡದಿದ್ದಲ್ಲಿ ಯಾದಗಿರಿ ಜಿಲ್ಲಾ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂ.ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಎಚ್ಚರಿಸಿದರು.
ಸಂಘಟನೆಯಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ರಸ್ತೆ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ ಇವರನ್ನು ವರ್ಗಾವಣೆ ಮಾಡಲು ಜಿಲ್ಲೆಯ ನಾಲ್ವರು ಜನಪ್ರತಿನಿಧಿಗಳು ಒತ್ತಡ ಹೇರುತ್ತಿದ್ದಾರೆ. ಅವಧಿಗೂ ಮುನ್ನ ವರ್ಗಾವಣೆ ಮಾಡುವುದು ಕಾನೂನು ರೀತಿ ವಿರೋಧವಾಗುತ್ತದೆ. ಯಾವ ಶಾಸಕರಿಗೂ ಎಸ್‌ಪಿಯವರ ಸೇವೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೇಷ್ಠತೆ ಪದ್ಧತಿ ಪ್ರಜಾಪ್ರಭುತ್ವದ ಒಕ್ಕೂಟದ ವ್ಯವಸ್ಥೆಯಲ್ಲಿ ಯಾವ ರಾಜ್ಯದಲ್ಲೂ ಇಲ್ಲದೆ ಇರುವಾಗ ಕರ್ನಾಟಕದಲ್ಲಿ ಮಾತ್ರ ಯಾಕೆ ಎಂದು ಪ್ರಶ್ನಿಸಿದ ಮುಖಂಡರು, ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಸಮಾಜದಲ್ಲಿ ಶಾಂತಿ, ಸುಭಿಕ್ಷೆ ತರಲು ಯತ್ನಿಸಿದವರನ್ನು ದಿಢೀರ್ ವರ್ಗಾಯಿಸುವುದು ಯಾವ ಕಾನೂನಿಲ್ಲದೆ? ನಿಷ್ಠಾವಂತರಿಗೆ ರಾಜ್ಯ ಕಾಂಗ್ರೆಸ್ ಸರಕಾರ ಸಹಕಾರ ನೀಡುವುದಿಲ್ಲವೇ? ಹಾಗಾದರೆ ನ್ಯಾಯಕ್ಕಾಗಿ ಯಾರನ್ನು ಕೇಳಬೇಕು ಎಂದರು.
ನಂತರ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಬರೆದ ಮನವಿ ಪತ್ರವನ್ನು ಪಿಐ ಉಮೇಶ ನಾಯಕ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಾನಪ್ಪ ಕಟ್ಟಿಮನಿ, ಮಾನು ಗುರಿಕಾರ, ಚಂದ್ರಶೇಖರ ಹಸನಾಪುರ, ಮಲ್ಲಿಕಾರ್ಜುನ ತಳ್ಳಳ್ಳಿ, ಮೂರ್ತಿ ಬೊಮ್ಮನಹಳ್ಳಿ, ಬಸವರಾಜ ದೊಡ್ಡಮನಿ, ವೀರಭದ್ರಪ್ಪ ತಳವಾರಗೇರಾ, ಜಟ್ಟೆಪ್ಪ ನಾಗರಾಳ, ದೇವೇಂದ್ರಪ್ಪ ಬಾದ್ಯಾಪುರ, ಹಣಮಂತ ದೊರೆ, ಮಹೇಶ ಸುಂಗಲಕರ್, ಮಲ್ಲಪ್ಪ ಬಡಿಗೇರ, ಮರಿಲಿಂಗಪ್ಪ, ಹುಲಗಪ್ಪ, ಬಸವರಾಜ ಬೊಮ್ಮನಹಳ್ಳಿ ಸೇರಿದಂತೆ ಇತರರಿದ್ದರು. ಪ್ರತಿಭಟನೆ ಅಂಗವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.







