ಸುರಪುರ | ಬರಗಾಲ ಘೋಷಿಸಿ ಪರಿಹಾರ ನೀಡದಿದ್ದರೆ ಪ್ರತಿಭಟನೆ: ಮಾಳಪ್ಪ ಕಿರದಳ್ಳಿ

ಸುರಪುರ: ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯವನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡದಿದ್ದರೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಅವರು, ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಯಾದಗಿರಿ ಜಿಲ್ಲೆಯಲ್ಲಿ ಹತ್ತಿ, ಹೆಸರು ಸೇರಿದಂತೆ ವಿವಿಧ ಬೆಳೆಗಳು ಮೊಳಕೆ ಹಂತದಲ್ಲಿಯೇ ಒಣಗಿ ನಾಶವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.
ಸಾವಿರಾರು ರೂಪಾಯಿ ವೆಚ್ಚ ಮಾಡಿ ಹಾಗೂ ಸಾಲ ಮಾಡಿ ಕೃಷಿ ಚಟುವಟಿಕೆ ನಡೆಸಿದ ರೈತರು ಬೆಳೆ ನಷ್ಟದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಮಸ್ಯೆಗಳತ್ತ ಗಮನ ಹರಿಸದೆ ರಾಜಕೀಯ ಚಟುವಟಿಕೆಗಳಲ್ಲಿ ನಿರತರಾಗಿವೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಆಡಳಿತದಿಂದ ಬೆಳೆ ನಷ್ಟದ ವರದಿ ಪಡೆದು, ಸರ್ಕಾರ ಕೂಡಲೇ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ರೈತರ ಸಂಕಷ್ಟಕ್ಕೆ ಸರ್ಕಾರಗಳು ತಕ್ಷಣ ಸ್ಪಂದಿಸದಿದ್ದರೆ, ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಳಪ್ಪ ಕಿರದಳ್ಳಿ ಎಚ್ಚರಿಕೆ ನೀಡಿದ್ದಾರೆ.






