ಸುರಪುರ | ಮಳೆಯಿಂದ ಬೆಳೆ ಹಾನಿಯಾದ ಜಮೀನುಗಳಿಗೆ ಪರಿಹಾರ ನೀಡಿ : ಹಣಮಂತ್ರಾಯ ಮಡಿವಾಳ

ಸುರಪುರ: ಕಳೆದ ಅನೇಕ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಬೆಳೆದ ಬೆಳೆ ಹಾನಿಯಾಗಿದ್ದು, ಸರ್ಕಾರ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಹಣಮಂತ್ರಾಯ ಮಡಿವಾಳ ಆಗ್ರಹಿಸಿದ್ದಾರೆ.
ತಾಲೂಕಿನ ಸೂಗೂರ ಗ್ರಾಮದ ಮರೆಪ್ಪ ಶಾಂತಗೇರಿ ರೈತನ ಬೆಳೆ ಹಾನಿ ಜಮೀನಿಗೆ ಭೇಟಿ ನೀಡಿ ಮಾತನಾಡಿದ ಅವರು, ರೈತ ಈಗಾಗಲೇ ಸಾವಿರಾರು ರೂ. ಖರ್ಚು ಮಾಡಿ ಬೀಜ ಗೊಬ್ಬರ ಹಾಗೂ ಕೂಲಿ ಆಳುಗಳಿಗಾಗಿ ಖರ್ಚು ಮಾಡಿಕೊಂಡಿದ್ದು, ಸಾಲ ಸೋಲ ಮಾಡಿ ವ್ಯವಸಾಯ ಮಾಡುತ್ತಿರುವ ರೈತನಿಗೆ ಮಳೆಯಿಂದ ಬೆಳೆ ಹಾನಿಯಾಗಿ ಬರಸಿಡಿಲು ಬಡಿದಂತಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರ ಕೂಡಲೇ ರೈತರ ನೆರವಿಗೆ ಬರಬೇಕು. ಕಂದಾಯ ಇಲಾಖೆಯ ಅಧಿಕಾರಿಗಳು ಕೃಷಿ ಇಲಾಖೆಯ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿಯ ವರದಿಯನ್ನು ಸಲ್ಲಿಸಬೇಕು ಮತ್ತು ಜಿಲ್ಲಾಡಳಿತ ಕೂಡಲೇ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಶೀಘ್ರದಲ್ಲಿ ಪರಿಹಾರ ನೀಡದಿದ್ದಲ್ಲಿ ನಮ್ಮ ಸಂಘಟನೆಯಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.





