ಸುರಪುರ: ರಸಗೊಬ್ಬರ ಅಂಗಡಿಗಳ ಪರವಾನಿಗೆ ರದ್ದು ಮಾಡಲು ಮನವಿ

ಸುರಪುರ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ರಸಗೊಬ್ಬರ ಅಂಗಡಿಗಳಿಂದ ರೈತರಿಗೆ ತೊಂದರೆ ಮಾಡಲಾಗುತ್ತಿದ್ದು,ಅಂತಹ ರಸಗೊಬ್ಬರ ಅಂಗಡಿಗಳ ಪರವಾನಿಗೆ ರದ್ದು ಮಾಡುವಂತೆ ಭೀಮವಾದ ದಲಿತ ಸಂಘರ್ಷ ಸಮಿತಿ ಮುಖಂಡರು ಒತ್ತಾಯಿಸಿದರು.
ಈ ಕುರಿತು ಸಂಘಟನೆಯ ಜಿಲ್ಲಾ ಸಂಚಾಲಕ ಶಿವಶಂಕರ ಬೊಮ್ಮನಹಳ್ಳಿ ಮಾತನಾಡಿ, ಸುರಪುರ ಪಟ್ಟಣ ಸೇರಿದಂತೆ ಅನೇಕ ರಸಗೊಬ್ಬರ ಮಾರಾಟಗಾರರು ಅಂಗಡಿಗೆ ರೈತರು ರಸಗೊಬ್ಬರ ಖರೀದಿಗೆ ಬಂದರೆ ಬರೀ ರಸಗೊಬ್ಬರ ಕೊಡುವುದಿಲ್ಲ, ರಸಗೊಬ್ಬರ ಜೊತೆಗೆ ಕಡ್ಡಾಯವಾಗಿ ಕ್ರಿಮಿನಾಶಕ ತೆಗೆದುಕೊಂಡರೆ ರಸಗೊಬ್ಬರ ಕೊಡುವುದಾಗಿ ಷರತ್ತು ಹಾಕಿ ರೈತರಿಗೆ ಕ್ರಿಮಿನಾಶಕ ಅಗತ್ಯವಿಲ್ಲದಿದ್ದರೂ ಖರೀದಿಸಲು ಒತ್ತಾಯ ಮಾಡಲಾಗಿದೆ. ಇದರಿಂದ ರೈತರು ತುಂಬಾ ತೊಂದರೆ ಪಡುವಂತಾಗಿದೆ. ಅಲ್ಲದೆ ಹತ್ತಿ ಬೀಜಕ್ಕೆ ನಿಗದಿತ ದರಕ್ಕಿಂತ ದುಪ್ಪಟ್ಟು ಹಣ ಪಡೆಯಲಾಗುತ್ತಿದೆ, ಆದ್ದರಿಂದ ಕೂಡಲೇ ಎಲ್ಲಾ ರಸಗೊಬ್ಬರ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ ರೈತರಿಗೆ ರಸಗೊಬ್ಬರ ಒದಗಿಸಿಕೊಡಬೇಕು, ಇಲ್ಲದಿದ್ದರೆ ನಮ್ಮ ಸಂಘಟನೆಯಿಂದ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಕೃಷಿ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ತಳವಾರಗೇರ, ಹಣಮಂತ್ರಾಯ ಬಿಜಾಸಪುರ, ಮಲ್ಲಿಕಾರ್ಜುನ ಜಾಲಿಬೆಂಚಿ, ತಾಲೂಕ ಸಂಚಾಲಕ ಮಲ್ಲು ಮುಷ್ಠಳ್ಳಿ, ಬಸವರಾಜ ಬಡಿಗೇರ, ಮಲ್ಲಪ್ಪ ದೊಡ್ಮನಿ, ಹಣಮಂತ ತೇಲ್ಕರ್, ಶರಣಪ್ಪ ದೊಡ್ಮನಿ, ಮೌಲು ಯಡಹಳ್ಳಿ,ರಘುನಂದನ ತೇಲ್ಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.