ಸುರಪುರ | ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ಈಡಿ ದಾಳಿ ಖಂಡಿಸಿ ರಸ್ತೆ ತಡೆ ಪ್ರತಿಭಟನೆ

ಸುರಪುರ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ದಾಳಿ ನಡೆಸಿರುವುದನ್ನು ಖಂಡಿಸಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮುಖಂಡರು ಪಟ್ಟಣದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಮುಖಂಡರು, ಸಿಬಿಐ ಮತ್ತು ಇ.ಡಿ. ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
ಸತೀಶ್ ಜಾರಕಿಹೊಳಿ ಅವರು ಪ್ರಗತಿಪರ ಚಿಂತನೆ ಹೊಂದಿರುವ ಹಿಂದುಳಿದ ವರ್ಗಗಳ ನಾಯಕರು. ಸರಳ ಜೀವನದ ಮೂಲಕ ಸಮಾಜದ ಅನೇಕ ಜನರಿಗೆ ನೆರವಾಗಿರುವ ಅವರ ಏಳಿಗೆಯನ್ನು ಸಹಿಸದೆ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಇ.ಡಿ. ದಾಳಿಗಳನ್ನು ನಡೆಸಿ ಅವರನ್ನು ಕುಗ್ಗಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
ಸತೀಶ್ ಜಾರಕಿಹೊಳಿ ಯಾವುದೇ ಬೆದರಿಕೆಗೆ ಮಣಿಯುವ ವ್ಯಕ್ತಿಯಲ್ಲ. ದಲಿತ ಮತ್ತು ಹಿಂದುಳಿದ ಸಮುದಾಯದ ನಾಯಕರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಇಂತಹ ಕ್ರಮಗಳನ್ನು ಅನುಸರಿಸುತ್ತಿದ್ದು, ಇದನ್ನು ವಾಲ್ಮೀಕಿ ನಾಯಕ ಸಮುದಾಯ ಸಹಿಸುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ಇಂತಹ ಉದ್ದೇಶಪೂರ್ವಕ ದಾಳಿಗಳಿಗೆ ಕಡಿವಾಣ ಹಾಕುವಂತೆ ರಾಷ್ಟ್ರಪತಿಗಳು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಉದ್ದೇಶಿಸಿ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಶೀಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಸಲ್ಲಿಸಲಾಯಿತು.
ಸುಮಾರು ಅರ್ಧ ಗಂಟೆ ರಸ್ತೆ ತಡೆ ನಡೆದ ಪರಿಣಾಮ ಪ್ರಮುಖ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡು ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಭೀಮನಗೌಡ ಹೇಮನೂರ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ,ಕನಕಾಚಲ ಜಾಗಿರದಾರ, ನಾಗರಾಜ ಪ್ಯಾಪ್ಲಿ,ಭೀಮು ನಾಯಕ ಮಲ್ಲಿಬಾವಿ, ಬಸವರಾಜ ಪಾಟೀಲ,ರಂಗಣ್ಣ ದೊರೆ, ವೆಂಕಟಪ್ಪ ನಾಯಕ ದೇಸಾಯಿ, ನಿಂಗನಗೌಡ ಗುಳಬಾಳ, ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ, ಹುಲಗಪ್ಪ ಗೌಡ ಶಖಾಪುರ, ನಾರಾಯಣಗೌಡ ಶಖಾಪುರ, ಮರೆಪ್ಪ ಗೌಡ ಶಖಾಪುರ, ಭೀಮಣ್ಣ ಶಖಾಪುರ, ರಾಜಶೇಖರ ನಾಯಕ, ಕೃಷ್ಣ ಪೂಜಾರಿ, ಯಲ್ಲಪ್ಪ, ಮಾನಪ್ಪ ಬಾದ್ಯಾಪುರ, ಮೌನೇಶ ಬೇಟೆಗಾರ, ಬಸವರಾಜ ದೊರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.






