ಸುರಪುರ | ಸೆಳಗಿಯಲ್ಲಿ 2.25 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ
ಕೆಕೆಆರ್‌ಡಿಬಿ ಅನುದಾನದಲ್ಲಿ ಎಸ್‌ಸಿ ವಾರ್ಡ್‌ನಿಂದ ಜಾಕವೆಲ್‌ವರೆಗೆ ರಸ್ತೆ ನಿರ್ಮಾಣ ಆರಂಭ

ಸುರಪುರ : ತಾಲೂಕಿನ ಸೆಳಗಿ ಗ್ರಾಮದ ಎಸ್‌ಸಿ ವಾರ್ಡ್‌ನಿಂದ ಜಾಕವೆಲ್‌ವರೆಗೆ ನಿರ್ಮಾಣಗೊಳ್ಳಲಿರುವ ರಸ್ತೆ ಕಾಮಗಾರಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕರು, ಸಾರ್ವಜನಿಕರ ಮನವಿಯ ಮೇರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) 2025-26ನೇ ಸಾಲಿನ ಯೋಜನೆಯಡಿ 2.25 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕಿನ ಸಮಗ್ರ ಅಭಿವೃದ್ಧಿಯಲ್ಲಿ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರತಿಯೊಂದು ಗ್ರಾಮದಲ್ಲೂ ರಸ್ತೆ, ಶಾಲೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲಾಗುತ್ತಿದೆ ಎಂದು ಹೇಳಿದರು.
ತಮ್ಮ ತಂದೆಯವರಂತೆ ತಾವೂ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು, ಮುಂದೆಯೂ ಜನರ ಸಹಕಾರ ಮತ್ತು ಬೆಂಬಲ ಇರಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ನಯೋಪ್ರಾ ಅಧ್ಯಕ್ಷ ಪ್ರಕಾಶ್ ಗುತ್ತೇದಾರ, ಹಿರಿಯ ಮುಖಂಡ ಮಲ್ಲಣ್ಣ ಸಾಹುಕಾರ್ ನರಸಿಂಗಪೇಟ ಸೇರಿದಂತೆ ಗ್ರಾಮದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




