ಸುರಪುರ | ಮಳೆಗಾಗಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದಿಂದ ವಿಶೇಷ ಪ್ರಾರ್ಥನೆ

ಸುರಪುರ : ಮಳೆ ಕೊರತೆಯಿಂದ ರೈತರು ಹಾಗೂ ಜನರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ಪಟ್ಟಣದ ತಿಮ್ಮಾಪುರ ರಂಗಂಪೇಟೆಯ ಹಸನಾಪುರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದ ವತಿಯಿಂದ ಶನಿವಾರ ಸಾಮೂಹಿಕ ವಿಶೇಷ ಪ್ರಾರ್ಥನೆ ನಡೆಯಿತು.
ಬೆಳಿಗ್ಗೆ ಜಾಮೀಯಾ, ಯೂಸೂಫಿಯಾ, ಶೇಖ್, ಆಯಾಷಾ, ರಹೀಮಾ, ನೀಯಾ ಹಾಗೂ ಮಕ್ಕಾ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ, ಮಂಗಲ ಬಜಾರ್ ಮತ್ತು ಮುಖ್ಯ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಈದ್ಗಾ ಮೈದಾನಕ್ಕೆ ಆಗಮಿಸಿದ ಭಕ್ತರು ಮಳೆ ಹಾಗೂ ಉತ್ತಮ ಬೆಳೆಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ತಿಮ್ಮಾಪುರ ಜಾಮೀಯಾ ಮಸೀದಿಯ ಇಮಾಮ್ ಜಮೀರ್ ಅಹಮದ್ ಖತೀಬ್ ಮಾತನಾಡಿ, ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರವೂ ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದು, ಮಳೆಯ ಕೊರತೆಯಿಂದ ಜನಜೀವನ ತೊಂದರೆಗೆ ಸಿಲುಕಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸುರಪುರ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಿದರೆ ಸಂಕಷ್ಟಗಳು ದೂರವಾಗಲಿ ಎಂಬ ನಂಬಿಕೆಯೊಂದಿಗೆ ಈ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ತಿಮ್ಮಾಪುರ ರಂಗಂಪೇಟೆ ಸೇರಿದಂತೆ ವಿವಿಧ ಭಾಗಗಳ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದರು.






