ಸುರಪುರ | ಟ್ರ್ಯಾಕ್ಟರ್ ಢಿಕ್ಕಿ : ಬೈಕ್ ಸವಾರ ಮೃತ್ಯು

ಸುರಪುರ: ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಟ್ರ್ಯಾಕ್ಟರ್ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಮಹಾತ್ಮ ಗೌತಮ್ ಬುದ್ಧ ವೃತ್ತದ ಬಳಿಯ ಗ್ರಂಥಾಲಯ ಮುಂಭಾಗದಲ್ಲಿ ನಡೆದಿದೆ.
ಶನಿವಾರ ಬೆಳಿಗ್ಗೆ ಮಹಾತ್ಮ ಗಾಂಧಿ ವೃತ್ತದ ಕಡೆಯಿಂದ ರಂಗಂಪೇಟೆ ಕಡೆಗೆ ಟ್ರ್ಯಾಕ್ಟರ್ ಬರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ತಾಲೂಕಿನ ಅಡ್ಡೊಡಗಿ ಗ್ರಾಮದ ಶರ್ಮುದ್ದಿನ್ ಲವಾರಿ (40) ಅವರಿಗೆ ಗುದ್ದಿದ ಪರಿಣಾಮ ಬೈಕ್ ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿಕೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಮತ್ತೋರ್ವ ವ್ಯಕ್ತಿಯಾದ ಯಾದಗಿರಿ ಜಿಲ್ಲೆಯ ಶಾಂತಿನಗರ ನಿವಾಸಿ ಅಬ್ದುಲ್ ಅಲಿ ಶಹಾನ್ ಅವರಿಗೂ ಟ್ರ್ಯಾಕ್ಟರ್ ಗುದ್ದಿದ ಪರಿಣಾಮ ಅವರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಟ್ರ್ಯಾಕ್ಟರ್ ಗುದ್ದಿದ ರಭಸಕ್ಕೆ ಅನೇಕ ವಾಹನಗಳು ಪರಸ್ಪರ ತಾಗಿಕೊಂಡು ಕೆಲವು ವಾಹನಗಳು ಜಖಂಗೊಂಡಿವೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸುರಪುರ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದಣ್ಣ ಯಡ್ರಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ಬಳಿಕ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಟ್ರ್ಯಾಕ್ಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಉಮೇಶ ಎಂ. ನಾಯಕ ತಿಳಿಸಿದ್ದಾರೆ.







