ಅಕಾಲಿಕ ಮಳೆಗೆ ಸುರಪುರದಲ್ಲಿ ಅವಾಂತರ: ಮನೆಗಳಿಗೆ ನೀರು ನುಗ್ಗಿ ಜನರಿಗೆ ಸಂಕಷ್ಟ

ಸುರಪುರ: ಪಟ್ಟಣದಲ್ಲಿ ಶುಕ್ರವಾರ ಬೆಳಗಿನ ಜಾವ ಸುರಿದ ಅಕಾಲಿಕ ಭಾರಿ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದರು.
ರಂಗಂಪೇಟೆಯ ಕುಂಬಾರ ಓಣಿಯಲ್ಲಿ ಗುಡ್ಡದಿಂದ ಹರಿದು ಬಂದ ಭಾರಿ ಪ್ರಮಾಣದ ಮಳೆ ನೀರು ಮುಖ್ಯರಸ್ತೆ ಮೂಲಕ ಮನೆಗಳೊಳಗೆ ನುಗ್ಗಿದ ಪರಿಣಾಮ ಮನೆಯಲ್ಲಿದ್ದ ದವಸ ಧಾನ್ಯ, ಎಲೆಕ್ಟ್ರಿಕಲ್ ಉಪಕರಣಗಳು ಸೇರಿದಂತೆ ಹಲವು ವಸ್ತುಗಳು ಹಾನಿಗೀಡಾಗಿವೆ.
ಬೆಳಗಿನ ಜಾವ ನಿದ್ದೆಯಲ್ಲಿದ್ದ ಜನರು ಮನೆಗಳೊಳಗೆ ನೀರು ನುಗ್ಗಿರುವುದನ್ನು ಕಂಡು ಆತಂಕಗೊಂಡರು. ನೀರಿನಿಂದ ಮನೆಯ ವಸ್ತುಗಳು ಹಾಳಾಗಿರುವುದಕ್ಕೆ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.
ತೊಂದರೆ ಕುರಿತು ಮಾತನಾಡಿದ ಸ್ಥಳೀಯರು, ಗುಡ್ಡದಿಂದ ಹರಿದು ಬರುವ ಮಳೆ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತಿರುವ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದೆ. ಈ ಕುರಿತು ನಗರಸಭೆ ಅಧಿಕಾರಿಗಳು ಹಾಗೂ ತಹಸೀಲ್ದಾರರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ ಎಂದು ಆರೋಪಿಸಿದರು.
“ಮಳೆಗಾಲ ಬಂತಂದರೆ ರಾತ್ರಿ ನಿದ್ದೆಯೇ ಇಲ್ಲದಂತಾಗುತ್ತದೆ. ಈಗಲೇ ಅಕಾಲಿಕ ಮಳೆಯಿಂದ ಇಷ್ಟು ತೊಂದರೆ ಆಗಿದ್ದರೆ ಮುಂದಿನ ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು” ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದರು.
ಗುಡ್ಡದಿಂದ ಹರಿದು ಬರುವ ನೀರು ಮುಖ್ಯರಸ್ತೆ ಮೂಲಕ ಮನೆಗಳಿಗೆ ನುಗ್ಗದಂತೆ ರಸ್ತೆ ಬದಿಯಲ್ಲಿ ಸಮರ್ಪಕ ಒಳಚರಂಡಿ ನಿರ್ಮಿಸಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಬೆಳಿಗ್ಗೆ ಸುರಿದ ಭಾರಿ ಮಳೆಯಿಂದ ಮನೆ ಒಳಗೆ ನೀರು ನುಗ್ಗಿ ಎಲ್ಲಾ ವಸ್ತುಗಳು ಹಾಳಾಗಿವೆ. ನಾನು ಅಂಗವಿಕಲಳಾಗಿದ್ದು ನೀರು ಹೊರ ಹಾಕಲು ತುಂಬಾ ತೊಂದರೆ ಆಗುತ್ತಿದೆ. ಶಾಸಕರು ಮತ್ತು ತಹಸೀಲ್ದಾರರು ಸಮಸ್ಯೆ ಗಮನಿಸಿ ಮಳೆ ನೀರು ಮನೆಗಳಿಗೆ ನುಗ್ಗದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು.
-ನಾಗಮ್ಮ ಕುಂಬಾರ, ರಂಗಂಪೇಟೆ






