ಸುರಪುರ | ಕಾಯಕವೇ ಕಲಿಕೆ, ದಾಸೋಹವೇ ಅನುಭವ: ಪ್ರಭುಲಿಂಗ ಮಹಾಸ್ವಾಮೀಜಿ

ಸುರಪುರ: ಕಾಯಕವೇ ಕಲಿಕೆ, ದಾಸೋಹವೇ ಅನುಭವ ಹಾಗೂ ಸಮಾನತೆಯೇ ಜಗತ್ತಿನ ಬೆಳಕು ಎಂಬುದು ಶರಣರ ಆಶಯವಾಗಿತ್ತು ಎಂದು ಪ್ರಭುಲಿಂಗ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ನಿಷ್ಠಿ ಕಡ್ಲಪ್ಪನವರ ವಿರಕ್ತಮಠದಲ್ಲಿ ನಡೆದ ‘ಶ್ರಾವಣ ಶ್ರವಣ ಶಿವಾನುಭವ ಚಿಂತನ’ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಆಶಯದಂತೆ ಶರಣರು ಜಾತಿ, ಮತ ಹಾಗೂ ಪಂಥಗಳನ್ನು ಮೀರಿ ಮನುಷ್ಯನನ್ನು ಮನುಷ್ಯನಾಗಿ ಕಂಡರು. ಇದೇ ಶರಣರ ಲೋಕಾನುಭವವಾಗಿದೆ ಎಂದು ಹೇಳಿದರು.
‘ಶರಣರ ದೃಷ್ಟಿಯಲ್ಲಿ ಲೋಕಾನುಭವ’ ವಿಷಯದ ಕುರಿತು ಅನುಭಾವ ಚಿಂತನೆ ಮಂಡಿಸಿದ ಮಂಗಳೂರಿನ ಶರಣ ಭೀಮರಾಯ ಒಂಟೆತ್ತು ಮಾತನಾಡಿ, ಅನುಭವವೇ ಪ್ರಧಾನವಾದ ನೈತಿಕ ಹಾಗೂ ಸತ್ಯಶುದ್ಧ ಬದುಕಿನ ಮಾರ್ಗವೇ ಲೋಕಾನುಭವವಾಗಿದೆ ಎಂದರು.
ಲೋಕಾನುಭವ ಎಂದರೆ ಕೇವಲ ಬಾಹ್ಯ ಜಗತ್ತಿನ ತಿರುಗಾಟ ಅಥವಾ ಇಂದ್ರಿಯಸುಖವಲ್ಲ. ಬದುಕಿನ ಅನುಭವಗಳ ಮೂಲಕ ಸತ್ಯವನ್ನು ಕಂಡುಕೊಳ್ಳುವುದು, ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸುವುದು ಹಾಗೂ ದೈಹಿಕ ಶ್ರಮದೊಂದಿಗೆ ಆಧ್ಯಾತ್ಮಿಕತೆಯನ್ನು ಬೆಸೆಯುವ ಸಾಧನವಾಗಿದೆ ಎಂದು ವಿವರಿಸಿದರು.
ವೇದಿಕೆಯಲ್ಲಿ ಉಪನ್ಯಾಸಕರಾದ ಸಿದ್ದನಗೌಡ ಪಾಟೀಲ್ ಹಾಗೂ ಮಂಗಳೂರಿನ ಶ್ರೀ ಶರಣಬಸವ ಸಾಧು ಮಹಾರಾಜರು ಉಪಸ್ಥಿತರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜಶೇಖರ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಎಚ್.ವೈ. ರಾಠೋಡ್ ಸ್ವಾಗತಿಸಿದರು. ಶಿವಶರಣಯ್ಯ ಸ್ವಾಮಿ ಬಳುಂಡಗಿ ಮಠ ಪ್ರಾರ್ಥಿಸಿದರು. ಪ್ರಾಣೇಶ್ ರಾವ್ ಕುಲಕರ್ಣಿ ಹಾಗೂ ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪನವರ ಮಠ ಮಂಗಲಗೀತೆ ಹಾಡಿದರು.
ಶಿವಾನುಭವ ಚಿಂತನದ ಆರಂಭದಲ್ಲಿ ಮೋಹನರಾವ್ ಮಾಳದಕರ್, ಉಮೇಶ್ ಯಾದವ್, ರಮೇಶ್ ಕುಲಕರ್ಣಿ, ಸುರೇಶ್ ಅಂಬುರೆ, ಜ್ಞಾನದೇವ ಪಾಣಿಬಾತೆ, ದೀಪಿಕಾ ಸ್ಥಾವರಮಠ ಸೇರಿದಂತೆ ಹಲವಾರು ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು.
ಮಾನಪ್ಪ ಭಜಂತ್ರಿ ಅವರ ಶಹನಾಯಿ ವಾದನ, ಸುರೇಶ್ ಅಂಬುರೆ ಅವರ ಹಾರ್ಮೋನಿಯಂ ಹಾಗೂ ಉಮೇಶ್ ಯಾದವ್ ಅವರ ತಬಲಾ ಜುಗಲ್‌ಬಂದಿ ಕಾರ್ಯಕ್ರಮದಲ್ಲಿ ಜನಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ವೀರೇಶ ನಿಷ್ಠಿ ದೇಶಮುಖ, ಸಿದ್ದಣ್ಣ ದಿಗ್ಗಾವಿ, ಬಸವರಾಜ್ ಜಾಲಹಳ್ಳಿ, ಸಂಗಮೇಶ ಗುಳಗಿ, ಸುಭಾಷ್ ಹೂಗಾರ್, ಶರಣಪ್ಪ ಮೊಗಲಿ, ವಿನೋದ ಪೂಜಾರಿ, ನಿಂಗಪ್ಪ ಸಿದ್ದಾಪುರ, ಮಲ್ಲಪ್ಪ ಸುರಪುರ, ಭೀಮಣ್ಣ ಶರಣರು ಗೋನಾಳ, ಭೀಮು ಹುಲಕಲ್, ಮಲ್ಲಿಕಾರ್ಜುನ ಬೇವಿನಮಟ್ಟಿ, ಶೇಖರ ಕುಂಬಾರ, ಅರುಣ ಯಾಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






