ಸುರಪುರ | ಬಿಸಿಲ ತಾಪಕ್ಕೆ ಕಾರ್ಮಿಕ ಮೃತ್ಯು : ಶಂಕೆ

ಸುರಪುರ: ಪಟ್ಟಣದ ನಗರಸಭೆ ವ್ಯಾಪ್ತಿಯ ಸತ್ಯಂಪೇಟೆ ಗ್ರಾಮದಲ್ಲಿ ತೀವ್ರ ಬಿಸಿಲಿನ ತಾಪಕ್ಕೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೃತರನ್ನು ಸಿದ್ದಪ್ಪ ಶರಣಪ್ಪ ಕೊಂಡಗುಳಿ (30) ಎಂದು ಗುರುತಿಸಲಾಗಿದೆ.
ಗುರುವಾರ ಮಧ್ಯಾಹ್ನ ಗ್ರಾಮದ ಸಮೀಪದ ಹಸನಾಪುರ ಪೆಟ್ರೋಲ್ ಬಂಕ್ ಪ್ರದೇಶಕ್ಕೆ ತೆರಳಿ ಮನೆಗೆ ಮರಳಿ ಬಂದ ಕೆಲವೇ ಕ್ಷಣಗಳಲ್ಲಿ ಬಳಲಿ ಕುಸಿದು ಬಿದ್ದಿದ್ದು, ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅತ್ಯಂತ ಬಡ ಕುಟುಂಬಕ್ಕೆ ಸೇರಿದ ಸಿದ್ದಪ್ಪ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ಕೆಲಸ ಇಲ್ಲದ ಕಾರಣ ಹೊರಗೆ ಹೋಗಿ ಮನೆಗೆ ಹಿಂದಿರುಗಿದ ಬಳಿಕ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯ ಶಿವರುದ್ರ ಉಳ್ಳಿ ತಿಳಿಸಿದ್ದಾರೆ.
ತೀವ್ರ ಬಿಸಿಲು ಮತ್ತು ಉಷ್ಣತೆಯ ನಡುವೆಯೇ ಈ ಸಾವು ಸಂಭವಿಸಿರುವುದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
Next Story




