ಸುರಪುರ | ಲಾರಿ ಚಕ್ರದಡಿ ಸಿಲುಕಿ ವರ್ಷದ ಯುವಕ ಮೃತ್ಯು

ಸುರಪುರ: ಲಾರಿಯ ಪಕ್ಕದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಲಾರಿ ಚಕ್ರದಡಿ ಸಿಲುಕಿ 19 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬಾದ್ಯಾಪುರ ಗ್ರಾಮದ ಸಮೀಪದ ಮುಖ್ಯ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಶಹಾಪುರ ತಾಲೂಕಿನ ಚಾಮನಾಳ ಗ್ರಾಮದ ಭಾಗೇಶ್ (19) ಮೃತಪಟ್ಟ ಯುವಕ. ಭಾಗೇಶ್ ಮತ್ತಿಬ್ಬರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟದ ಆಹಾರ ಧಾನ್ಯಗಳನ್ನು ಪೂರೈಸಿ ಬೈರಿಮರಡಿ ಗ್ರಾಮದಿಂದ ಬಾದ್ಯಾಪುರದತ್ತ ತೆರಳುತ್ತಿದ್ದ ಲಾರಿಯ ಹಿಂಬದಿಯಿಂದ ಬೈಕ್ ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
ಅಪಘಾತದ ವೇಳೆ ಬೈಕ್‌ಗೆ ಲಾರಿ ತಗುಲಿದ ಪರಿಣಾಮ ಭಾಗೇಶ್ ನಿಯಂತ್ರಣ ತಪ್ಪಿ ಲಾರಿಯ ಹಿಂಬದಿಯ ಚಕ್ರದಡಿ ಬಿದ್ದಿದ್ದು, ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತದ ಬಳಿಕ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಮೃತನ ತಾಯಿ ಆರೋಪಿಸಿದ್ದು, ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಅದೇ ಬೈಕ್‌ನಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ಸುರಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಸುರಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ತಾಯಿ ನೀಡಿದ ದೂರಿನ ಮೇರೆಗೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ತನಿಖೆಯಿಂದ ತಿಳಿಯಬೇಕಿದೆ.






