ಸುರಪುರ | ಭೂಮಾನಂದ ಕೊಲೆ ಖಂಡಿಸಿ ಅಂಬೇಡ್ಕರ್ ವಾದ ಪ್ರತಿಭಟನೆ

ಸುರಪುರ: ದೇವದುರ್ಗ ತಾಲೂಕಿನ ಸುಂಕೇಶ್ವರಹಾಳದಲ್ಲಿ ಕೊಲೆಯಾಗಿರುವ ಹದ್ದಿನಾಳ ಗ್ರಾಮದ ದಲಿತ ಸಮುದಾಯದ ಯುವಕ ಭೂಮಾನಂದ ಅವರ ಕುಟುಂಬಕ್ಕೆ ಸರ್ಕಾರಿ ನೌಕರಿ ಹಾಗೂ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ಆಗ್ರಹಿಸಿದರು.
ಸಂಘಟನೆಯ ತಾಲೂಕು ಘಟಕದ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭೂಮಾನಂದ ಅವರು ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಜೀವನ ಸಾಗಿಸುತ್ತಿದ್ದ ಯುವಕರಾಗಿದ್ದರು. ಅವರ ಕೊಲೆ ಖಂಡನೀಯವಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಕೊಲೆಯ ಹಿಂದಿರುವ ಎಲ್ಲ ವ್ಯಕ್ತಿಗಳ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಹೊರತರಬೇಕು. ಭೂಮಾನಂದ ಅವರ ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ದಲಿತರ ಮೇಲಿನ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಮಾವಳಿ ಶಂಕರ್ ಅವರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಪರಶುರಾಮ್ ರೋಜಾ ಹಾಗೂ ತಾಲೂಕು ಸಂಚಾಲಕ ಶರಣಪ್ಪ ತಳವಾರಗೇರ ಮಾತನಾಡಿ ಘಟನೆಯನ್ನು ಖಂಡಿಸಿದರು.
ನಂತರ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿಯ ಸಿರಸ್ತೆದಾರರ ಮೂಲಕ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ತಾಲೂಕು ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಹಾದಿಮನಿ, ಗೊಲ್ಲಾಳಪ್ಪ ಕಟ್ಟಿಮನಿ, ಕೆಂಚಪ್ಪ ವಾಗಣಗೇರಾ, ಹೊನ್ನಪ್ಪ ಕಟ್ಟಿಮನಿ, ವಕೀಲ ಪ್ರಕಾಶ ಕಟ್ಟಿಮನಿ, ವಿಶ್ವನಾಥ ಹೊಸಮನಿ, ಶ್ರೀಹರಿ ತೇಲ್ಕರ್, ರಾಜು ಭಂಡಾರಿ, ಹಣಮಂತ ದೊಡ್ಡಮನಿ, ಭೀಮಪ್ಪ ಅರಳಹಳ್ಳಿ, ಅಂಬರೀಶ ದೊಡ್ಡ ಮನೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.






