ಸುರಪುರ | ಬೈಕ್ ಕಳವು ಆರೋಪಿಯ ಬಂಧನ, 57 ಬೈಕ್‌ಗಳ ವಶ: ಎಸ್ಪಿ ಪೃಥ್ವಿ ಶಂಕರ್

ಸುರಪುರ, ಜ. 24: ಕಳವು ಮಾಡಲಾದ 57 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಬೈಕ್ ಕಳ್ಳತನ ಕುರಿತು ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ ಸುರಪುರ ಪೊಲೀಸರು, ಹುಣಸಗಿ ಪಟ್ಟಣದ ಜನತಾ ಕಾಲನಿಯ ನಿವಾಸಿ ಕಟ್ಟಿಮನಿ (36) ಎಂಬ ಆರೋಪಿಯನ್ನು ಬಂಧಿಸಿ 57 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು.
ಜ. 11ರಂದು ಸತ್ಯಂಪೇಟೆ ನಿವಾಸಿ ನಿಂಗಪ್ಪ ಮಕಾಶಿ ಎಂಬವರು ತನ್ನ ಬೈಕ್ ಕಳ್ಳತನದ ಕುರಿತು ಸುರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಆರೋಪಿಯನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಬೈಕ್ ಕಳವು ಮಾಡಿರುವ ಕುರಿತು ಮಾಹಿತಿ ನೀಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ತನ್ನ ಇತರರೊಂದಿಗೆ ಸೇರಿ ಒಟ್ಟು 57 ಬೈಕುಗಳನ್ನು ಕಳ್ಳತನ ಮಾಡಿರುವ ಕುರಿತು ತಿಳಿಸಿದ ನಂತರ ಎಲ್ಲಾ ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನೊಂದಿಗೆ ಇನ್ನೂ ಆರು ಜನ ಸಹಚರರಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಆರೋಪಿಯು ಈ ಹಿಂದೆಯೂ ಕೂಡ ಬೇರೆ ಬೇರೆ ಕಡೆಗಳಲ್ಲಿ ಕಳ್ಳತನ ಮಾಡಿರುವ ಕುರಿತು ಮಾಹಿತಿ ತಿಳಿದು ಬಂದಿದೆ ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಎಸ್ಪಿ ಹೇಳಿ ಹೇಳಿದರು.
ಎಸ್ಪಿ ಪೃಥ್ವಿ ಶಂಕರ್ ಹಾಗೂ ಡಿವೈಎಸ್ಪಿ ಜಾವಿದ್ ಎನಂದರ್ ಮಾರ್ಗದರ್ಶನದಲ್ಲಿ ಸುರಪುರ ಠಾಣೆಯ ಪಿ ಐ ಉಮೇಶ ಎಂ ನೇತೃತ್ವದಲ್ಲಿ, ಪಿಎಸ್‌ಐ ಗಳಾದ ಸಿದ್ದಣ್ಣ ಯಡ್ರಾಮಿ, ಕೃಷ್ಣಾ ಸುಬೇದಾರ, ಹೆಚ್.ಸಿ ಗಳಾದ ಸಣ್ಣಕೆಪ್ಪ, ನಾಗರಾಜ, ಪಿಸಿ ಗಳಾದ ಮಲ್ಲಯ್ಯ, ಪ್ರಕಾಶ, ಹುಸೇನ್ ಭಾಷಾ, ಲಕ್ಷ್ಮಣ, ಜಗದೀಶ, ಹುಲಿಗೆಪ್ಪ,ಗೋವಿಂದ, ಆಂಜನೇಯ, ತಾಯಣ್ಣ, ಮಲಕಾರಿ ಹಾಗೂ ವಿಶೇಷವಾಗಿ ಯಾದಗಿರಿಯ ಬೆರಳಚ್ಚು ಘಟಕದ ಪಿಐ ರಮೇಶ ಕಾಂಬ್ಳೆ, ಜಿಲ್ಲಾ ಪೊಲೀಸ್ ಕಾರ್ಯಾಲಯದ ಎಆರ್‌ಎಸ್‌ಐ ಸುರೇಶ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಪೇದೆಗಳಾದ ಬಸವರಾಜ ಮುದಗಲ್, ಹುಲಿಗೆಪ್ಪ ಮತ್ತಿತರರು ಹಾಜರಿದ್ದರು.







