ಸುರಪುರ | ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆ

ಸುರಪುರ: ತಾಲ್ಲೂಕು ಆಡಳಿತದಿಂದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ ಆ.15 ರಂದು ನಡೆಯುವ ಸ್ವಾತಂತ್ರ್ಯದ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಲಿದ್ದು, ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸುವುದು ಕಡ್ಡಾಯವಾಗಿದೆ ಎಂದು ತಹಶೀಲ್ದಾರ್ ಹುಸೇನಸಾಬ್ ತಿಳಿಸಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲ್ಲೂಕಿನ ಎಲ್ಲಾ ಶಾಲಾ ಕಾಜೇಜು ಮತ್ತು ಕಚೇರಿಗಳಲ್ಲಿ ಬೆಳಿಗ್ಗೆ 8 ಗಂಟೆಯ ಒಳಗಾಗಿ ಧ್ವಜಾರೋಹಣ, ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಬೇಕು ಎಂದು ತಿಳಿಸಿದರು.
ಅಲ್ಲದೆ ನಂತರ ತಾಲ್ಲೂಕ ಆಡಳಿತದಿಂದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ 8:45ಕ್ಕೆ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನಡೆಯಲಿದೆ. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ, ಎಸೆಸೆಲ್ಸಿ ಮತ್ತು ಪಿಯುಸಿನಲ್ಲಿ ಅತಿಹೆಚ್ಚು ಅಂಕ ಪಡೆದ ತಲಾ 3 ಜನ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ನಡೆಯಲಿದೆ. ಆದ್ದರಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಲು ಪೊಲೀಸ್ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು, ವೈದ್ಯಕೀಯ ಸೇವೆಗಾಗಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು, ಶಾಲಾ ಮಕ್ಕಳಿಗೆ ಉಪಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳುವುದಾಗಿ ತಿಳಿಸಿದರು. ಆ.14 ರಂದು ರಾತ್ರಿ ತಾಲ್ಲೂಕಿನ ಎಲ್ಲಾ ಕಚೇರಿಗಳ ಮೇಲೆ ದೀಪಾಲಂಕಾರ ಮಾಡಬೇಕು, ಎಲ್ಲಾ ಮಹಾತ್ಮರ ವೃತ್ತಗಳಿಗೆ ದೀಪಾಲಂಕಾರ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಹಾಗೂ ಕಾರ್ಯಕ್ರಮಕ್ಕೆ ಬರುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡುವಂತೆ ಸಾರಿಗೆ ಘಟಕ ಅಧಿಕಾರಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ಶಿವಮೋನಯ್ಯ ಎಲ್.ಡಿ ನಾಯಕ, ಶಿವರಾಜ ನಾಯಕ, ಚಂದ್ರಶೇಖರ ನಾಯಕ ಬಿಚ್ಚಗತ್ತಿಕೇರ, ಭೀಮು ನಾಯಕ ಮಲ್ಲಿಬಾವಿ, ಮಹೇಂದ್ರಕುಮಾರ ಬಿಲ್ಲವ್ ಹಾಗೂ ತಾ.ಪಂ ಇಓ ಬಸವರಾಜ ಸಜ್ಜನ್, ಟಿಹೆಚ್‌ಓ ಡಾ.ಆರ್.ವಿ ನಾಯಕ,ಪಿ.ಐ ಉಮೇಶ ನಾಯಕ, ನಗರಸಭೆ ಪೌರಾಯುಕ್ತ ಬಸವರಾಜ ಟಣಕೇದಾರ, ಬಿಇಓ ಯಲ್ಲಪ್ಪ ಕಾಡ್ಲೂರ,ಕ.ರಾ.ಸ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣ ಕಲಬುರ್ಗಿ, ಸಿಡಿಪಿಓ ಲಾಲಸಾಬ್ ಪೀರಾಪುರ,ತೋಟಗಾರಕೆ ಇಲಾಖೆ ಎ.ಡಿ ಭೀಮರಾವ್, ಉಪ ನೊಂದಣಾಧಿಕಾರಿ ಗುರುರಾಜ ಸಜ್ಜನ್,ಕೃಷಿ ಇಲಾಖೆ ಎ.ಡಿ ರಾಮನಗೌಡ ಪಾಟೀಲ್,ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ.ಸುರೇಶ ಹಚ್ಚಡ್, ಗ್ರಾ.ಕು.ನೀ.ಸರಬರಾಜು ಇಲಾಖೆ ಎಇಇ ಹಣಮಂತ್ರಾಯ ಪಾಟೀಲ್,ಗೃಹರಕ್ಷಕ ದಳದ ಘಟಕಾಧಿಕಾರಿ ವೆಂಕಟೇಶ್ವರ ಸುರಪುರ,ಅಬಕಾರಿ ನಿರೀಕ್ಷಕ ಲಿಂಗರಾಜ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.







