ಸುರಪುರ | ಕೂಲಿ ಕಾರ್ಮಿಕರು ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು : ಬಸವರಾಜ ಸಜ್ಜನ್

ಸುರಪುರ: ಗ್ರಾಮೀಣ ಉದ್ಯೋಗ ಖಾತರೀಕರಣ ಕಾಯ್ದೆ (ನರೇಗಾ) ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ತಮ್ಮ ವೈಯಕ್ತಿಕ ಮಾಹಿತಿ ಹಾಗೂ ಹಾಜರಾತಿ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ದಾಖಲಿಸಲು NMMS (National Mobile Monitoring System) – e-KYC ಅಪ್ಲಿಕೇಶನ್ ನಲ್ಲಿ ಮಾಹಿತಿಯನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ ಎಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಸಜ್ಜನ್ ರವರು ತಿಳಿಸಿದ್ದಾರೆ.
ನರೇಗಾ ಯೋಜನೆಯ ಉದ್ದೇಶ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಕನಿಷ್ಠ 100 ದಿನಗಳ ವೇತನಾಧಾರಿತ ಉದ್ಯೋಗ ಒದಗಿಸುವುದಾಗಿದೆ. ಈ ಯೋಜನೆಯಡಿ ಪ್ರತಿ ಕಾರ್ಮಿಕರ ಕೆಲಸದ ವಿವರ, ಹಾಜರಾತಿ ಹಾಗೂ ಪಾವತಿ ಪ್ರಕ್ರಿಯೆ ಈಗ ಸಂಪೂರ್ಣ ಡಿಜಿಟಲ್ ಆಗಿ ನಡೆಯುತ್ತಿದ್ದು, ಇದರ ಅಸಲೀಯತೆಯನ್ನು ಖಚಿತಪಡಿಸಲು ಸರ್ಕಾರವು NMMS ಅಪ್ಲಿಕೇಶನ್ ಮೂಲಕ e-KYC (Electronic Know Your Customer) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ.
ನರೇಗಾ ಯೋಜನೆಯಡಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕನಿಗೂ ಆಧಾರ್ ನಂಬರಿನ ಆಧಾರದ ಮೇಲೆ NMMS ಅಪ್ಲಿಕೇಶನ್‌ನಲ್ಲಿ e-KYC ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇದು ಕೆಲಸದ ನಿಖರ ದಾಖಲೆ, ವೇತನ ಪಾವತಿ ಪಾರದರ್ಶಕತೆ ಹಾಗೂ ನಕಲಿ ಹಾಜರಾತಿ ತಡೆಗೆ ಸಹಾಯಕವಾಗುತ್ತದೆ.ಯಾವ ಕಾರ್ಮಿಕರು NMMS – e-KYC ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಅವರ ಕೆಲಸದ ಹಾಜರಾತಿ ದಾಖಲಾಗುವುದಿಲ್ಲ ಹಾಗೂ ವೇತನ ಪಾವತಿ ವಿಳಂಬವಾಗುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲಾ ಕಾರ್ಮಿಕರು ತಕ್ಷಣ ತಮ್ಮ ಗ್ರಾಮ ಪಂಚಾಯಿತ್ ಕಚೇರಿಯಲ್ಲಿ e-KYC ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಪ್ರತಿ ಕಾರ್ಮಿಕರು ತಮ್ಮ ಆಧಾರ್ ಕಾರ್ಡ್, ಜಾಬ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳನ್ನು ಕಡ್ಡಾಯವಾಗಿ ತಮ್ಮೊಂದಿಗೆ ತರಬೇಕೆಂದು ಅವರು ವಿನಂತಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಂತ್ರಿಕ ಸಹಾಯಕರು, ಬಿ ಎಪ್ ಟಿ, ಗ್ರಾಮ ಕಾಯಕ ಮಿತ್ರರರು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸ್ಥಳಮಟ್ಟದಲ್ಲಿ ಸಹಕಾರ ನೀಡಬೇಕೆಂದು ಸೂಚಿಸಲಾಯಿತು.
ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ಜನರ ಜೀವನಮಟ್ಟವನ್ನು ಸುಧಾರಿಸಲು ಮಹತ್ವದ ಪಾತ್ರವಹಿಸುತ್ತಿದ್ದು, ಡಿಜಿಟಲ್ ಪಾರದರ್ಶಕತೆ ಮತ್ತು ತಂತ್ರಜ್ಞಾನ ಬಳಕೆಯಿಂದ ಯೋಜನೆಯ ವಿಶ್ವಾಸಾರ್ಹತೆ ಮತ್ತಷ್ಟು ಹೆಚ್ಚುತ್ತಿದೆ. e-KYC ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾರ್ಮಿಕರಿಗೆ ತಕ್ಷಣವೇ ಅವರ ಕೆಲಸದ ದಾಖಲೆ ಮತ್ತು ಪಾವತಿ ವಿವರಗಳನ್ನು NMMS ಯ್ಯಾಪ್ ಮೂಲಕ ವೀಕ್ಷಿಸಲು ಅವಕಾಶವಿರುತ್ತದೆ.
ನರೇಗಾ ಯೋಜನೆಯ ಯಶಸ್ಸು ಕಾರ್ಮಿಕರ ಭಾಗವಹಿಸುವಿಕೆ ಮತ್ತು ಪಾರದರ್ಶಕ ಆಡಳಿತದ ಮೇಲೆ ಅವಲಂಬಿತವಾಗಿದೆ. ಎಲ್ಲಾ ಕಾರ್ಮಿಕರು ಸಮಯದಲ್ಲಿ NMMS – e-KYC ಪ್ರಕ್ರಿಯೆ ಪೂರ್ಣಗೊಳಿಸಿ ಸರ್ಕಾರದ ಈ ಉಪಕ್ರಮಕ್ಕೆ ಸಹಕರಿಸಬೇಕು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.







