ಆಲಮಟ್ಟಿ–ಯಾದಗಿರಿ ರೈಲು ಮಾರ್ಗ ಸರ್ವೆಗೆ ಟೆಂಡರ್ : ಸಂಸದ ಜಿ.ಕುಮಾರ ನಾಯಕ ಸಂತಸ

ಹುಣಸಗಿ: ಹಲವು ವರ್ಷಗಳ ಬೇಡಿಕೆಯಾಗಿದ್ದ ಆಲಮಟ್ಟಿ–ಯಾದಗಿರಿ ರೈಲು ಮಾರ್ಗ ನಿರ್ಮಾಣಕ್ಕಾಗಿ ಸರ್ವೆ ಕಾರ್ಯಕ್ಕೆ ಟೆಂಡರ್ ಕರೆಯಲಾಗಿರುವುದು ಅತ್ಯಂತ ಸಂತಸದ ಸಂಗತಿ ಎಂದು ಸಂಸದ ಜಿ. ಕುಮಾರ ನಾಯಕ ಹೇಳಿದರು.
ತಾಲೂಕಿನ ಗೆದ್ದಲಮರಿ ಗ್ರಾಮದಲ್ಲಿ ದಿ. ರಾಜಾ ವೆಂಕಟಪ್ಪ ನಾಯಕ ಹಾಗೂ ಬಸವಂತ್ರಾಯ ಸಾಹುಕಾರ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಲಮಟ್ಟಿ–ಯಾದಗಿರಿ ರೈಲು ಮಾರ್ಗ ನಿರ್ಮಾಣವಾದರೆ ಈ ಭಾಗದ ಜನರ ಬಹುಕಾಲದ ಕನಸು ನನಸಾಗಲಿದ್ದು, ಪ್ರದೇಶದ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು. ಗ್ರಾಮೀಣ ಭಾಗದ ಜನರು ಅತ್ಯಂತ ಹೃದಯವಂತರಾಗಿದ್ದು, ಇಂತಹ ಕಾರ್ಯಕ್ರಮಗಳು ಅವರ ಒಗ್ಗಟ್ಟಿನ ಸಂಕೇತವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ತಮ್ಮ ತಂದೆ ರಾಜಾ ವೆಂಕಟಪ್ಪ ನಾಯಕ ಅವರು ಮಾತಿಗಿಂತ ಕೃತಿಗೆ ಹೆಚ್ಚಿನ ಮಹತ್ವ ನೀಡಿದ ವ್ಯಕ್ತಿಯಾಗಿದ್ದರು. ಗೆದ್ದಲಮರಿ ಗ್ರಾಮ ಸೇರಿದಂತೆ ಕ್ಷೇತ್ರದ ಜನತೆ ಅವರ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ರಾಜಕಾರಣ ಮೀರಿದ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಅವರ ಹಾದಿಯಲ್ಲೇ ಮುಂದುವರಿದು ಜನಸೇವೆ ಮಾಡುತ್ತೇನೆ ಎಂದು ಹೇಳಿದರು.
ಬಸವಂತ್ರಾಯ ಸಾಹುಕಾರ ಅವರ ಆದರ್ಶವನ್ನು ಎಲ್ಲರೂ ಅನುಸರಿಸಿ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಕೊಡೇಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಹುಣಸಗಿ ಮತ್ತು ಸುರಪುರ ಭಾಗದಲ್ಲಿ ಮಳೆಯಾಶ್ರಿತ ಹತ್ತಿ ಹಾಗೂ ತೊಗರಿ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಕೂಡಲೇ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರನ್ನು ಭೇಟಿ ಮಾಡಿ ಹುಣಸಗಿ ಹಾಗೂ ಸುರಪುರ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು. ರೈತರಿಗೆ ಅಗತ್ಯ ನೆರವು ಒದಗಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗುಳಬಾಳ ರಾಮಲಿಂಗೇಶ್ವರ ಮಠದ ಮರಿಹುಚ್ಚೇಶ್ವರ ಸ್ವಾಮೀಜಿ, ಬಲಶೆಟ್ಟಿಹಾಳದ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಜಾ ಸಂತೋಷ ನಾಯಕ, ರಾಜಾ ಕುಮಾರ ನಾಯಕ, ರಾಜಾ ವಾಸುದೇವನಾಯಕ, ಹಿರಿಯ ಮುಖಂಡರಾದ ವಿಠ್ಠಲ ಯಾದವ, ಯಂಕೋಬ ಯಾದವ, ನಾಗಣ್ಣ ಸಾಹು ದಂಡಿನ್, ಗ್ಯಾನಚಂದ್ ಜೈನ್, ಗೋಪಾಲದಾಸ ಲಡ್ಡಾ, ಮಲ್ಲಣ್ಣ ಸಾಹು ಮುಧೋಳ, ಚಂದ್ರಶೇಖರ ದಂಡಿನ್, ನಿಂಗರಾಜ ಬಾಚಿಮಟ್ಟಿ, ಸಿದ್ದು ಮುಗದಲ್ಲ, ಬಸವರಾಜ ಬಳಿ, ನರೇಶ ಜೈನ್, ಈಶ್ವಪ್ಪ ಶ್ರೀಗಿರಿ, ಪ್ರಭುಗೌಡ ಹರನಾಳ, ಮರಿಲಿಂಗಪ್ಪ ಕರ್ನಾಳ, ದೊಡ್ಡದೇಸಾಯಿ ದೇವರಗೋನಾಲ, ಚಂದ್ರಶೇಖರ ಹಾವೇರಿ, ಗುಂಡಪ್ಪ ಸೊಲ್ಲಾಪುರ, ಭೀಮನಗೌಡ ಯಮನೂರ, ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ರಾಜಾ ವೆಂಕಟಪ್ಪನಾಯಕ ಹಾಗೂ ಬಸವಂತ್ರಾಯ ಸಾಹುಕಾರ ಅವರ ಮೂರ್ತಿ ಅನಾವರಣದ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಿತು. ಬಾಪುಗೌಡ ಪಾಟೀಲ ಸ್ವಾಗತಿಸಿದರು. ಮಾನಪ್ಪ ಸೂಗೂರು ನಿರೂಪಿಸಿದರು. ತಾರಾನಾಥ ಚವ್ವಾಣ ವಂದಿಸಿದರು.






