ಸುರಪುರದಲ್ಲಿ ನಿರಂತರವಾಗಿ ಸುರಿದ ಮಳೆಗೆ ಸಾವಿರಾರು ಎಕರೆ ಬೆಳೆ ಜಲಾವೃತ

ಸುರಪುರ: ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆದ ಸಾವಿರಾರು ಎಕರೆ ಬೆಳೆ ಜಲಾವೃತಗೊಂಡು ರೈತರಿಗೆ ದೊಡ್ಡ ಮಟ್ಟದಲ್ಲಿ ನಷ್ಟವುಂಟಾಗಿದೆ.
ತಾಲ್ಲೂಕಿನ ಚಂದಲಾಪುರ, ಬೇವಿನಾಳ, ರುಕ್ಮಾಪುರ, ಕವಡಿಮಟ್ಟಿ, ದೇವಾಪುರ, ತಿಂಥಣಿ, ಶೆಳ್ಳಗಿ, ಮುಷ್ಠಳ್ಳಿ, ಸತ್ಯಂಪೇಟೆ, ಲಕ್ಷ್ಮಿಪುರ ದೇವಿಕೇರಾ, ರತ್ತಾಳ ಸೇರಿದಂತೆ ಅನೇಕ ಗ್ರಾಮಗಳ ರೈತರು ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಹತ್ತಿ, ಭತ್ತ, ತೊಗರಿ, ಹೆಸರು ಸೇರಿದಂತೆ ಹಲವು ಬೆಳೆಗಳು ಜಲಾವೃತಗೊಂಡು ಹಾಳಾಗಿವೆ. ಅನೇಕ ಕಡೆಗಳಲ್ಲಿ ರಸ್ತೆಗಳು ಕಿತ್ತುಕೊಂಡು ಹೋಗಿ ಸಂಚಾರಕ್ಕೆ ತೊಂದರೆಯುಂಟಾಗಿದೆ. ಅಲ್ಲದೆ ಜಮೀನುಗಳಲ್ಲಿನ ಒಡ್ಡುಗಳು ಕಿತ್ತಿಕೊಂಡು ಹೋಗಿದ್ದರಿಂದ ಜಮೀನುಗಳಲ್ಲಿನ ಬೆಳೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಈ ಬಾರಿ ಮುಂಗಾರು ತುಸು ಮುಂಚೆಯೇ ಆರಂಭಗೊಂಡಿದ್ದರಿಂದ ಖುಷಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿರುವ ರೈತರಿಗೆ ಬಿಟ್ಟು ಬಿಡದೆ ಸುರಿದ ಮಳೆ ಕಣ್ಣೀರು ತರಿಸಿದೆ ಎಂದು ರೈತರು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ರೈತರ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ಸಾಲ ಮಾಡಿ ವ್ಯವಸಾಯ ಮಾಡುತ್ತಿರುವ ರೈತರಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ, ಸರಕಾರಕ್ಕೆ ವರದಿ ಸಲ್ಲಿಸಬೇಕು ಮತ್ತು ಸರಕಾರವೂ ಶೀಘ್ರದಲ್ಲಿ ರೈತರಿಗೆ ಪರಿಹಾರ ನೀಡಬೇಕು. ನಮ್ಮ ಭಾಗದ ಸಚಿವರು, ಶಾಸಕರು ಸದನದ ಗಮನಕ್ಕೆ ತಂದು ಶೀಘ್ರ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸುತ್ತದೆ.
- ಮಲ್ಲಿಕಾರ್ಜುನ ಸತ್ಯಂಪೇಟೆ ಕ.ರಾ.ರೈತ ಸಂಘದ ರಾಜ್ಯ ಉಪಾಧ್ಯಕ್ಷ







