ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು ಕಳುಹಿಸಿ ಬೆದರಿಕೆ: ಯಾದಗಿರಿಯಲ್ಲಿ ಬಿಜೆಪಿ ಪ್ರತಿಭಟನೆ

ಯಾದಗಿರಿ: ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಆನ್‌ಲೈನ್ ಮೂಲಕ ಚಾಕುಗಳನ್ನು ಕಳುಹಿಸಿ ಬೆದರಿಕೆ ಹಾಕಲು ಯತ್ನಿಸಿರುವ ಘಟನೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ರಾಜಕೀಯ ವಿರೋಧಿಗಳನ್ನು ಬೆದರಿಸುವ ಪ್ರವೃತ್ತಿಯನ್ನು ಖಂಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರೆಡ್ಡಿ ಮುದ್ದಾಳ, ಹಿರಿಯ ಮುಖಂಡ ರಾಚಣ್ಣಗೌಡ ಮುದ್ದಾಳ, ದೇವೇಂದ್ರನಾಥ ನಾದ್, ಖಂಡಪ್ಪ ದಾಸನ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಾ ಅವರು, ರಾಜಕೀಯದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಹಜ. ಆದರೆ ರಾಜಕೀಯ ವಿರೋಧವನ್ನು ವೈಯಕ್ತಿಕ ದ್ವೇಷಕ್ಕೆ ತಿರುಗಿಸಿ ಬೆದರಿಕೆ ಹಾಕುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರು ಸರ್ಕಾರದ ನೀತಿಗಳನ್ನು ಟೀಕಿಸಿದರೆ ರಾಜಕೀಯವಾಗಿ ಉತ್ತರ ನೀಡಬೇಕೇ ಹೊರತು, ಬೆದರಿಕೆಗಳ ಮೂಲಕ ಅವರನ್ನು ಮೌನಗೊಳಿಸುವ ಪ್ರಯತ್ನ ಮಾಡಬಾರದು. ಚಾಕುಗಳನ್ನು ಕಳುಹಿಸಿ ಬೆದರಿಕೆ ಹಾಕಿರುವ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಇದರ ಹಿಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಸಿದ್ದಣ್ಣಗೌಡ ವಡಿಗೇರಾ, ನಾಗರತ್ನ ಕುಪ್ಪಿ, ಶರಣಭೂಪಾಲರಡ್ಡಿಗೌಡ ನಾಯ್ಕಲ್, ಶರಣಗೌಡ ಬಾಡಿಯಾಳ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುನೀತಾ ಚವ್ಹಾಣ್, ವೀಣಾ ಮೋದಿ, ಯುವ ಮೋರ್ಚಾ ಅಧ್ಯಕ್ಷ ಲಕ್ಷ್ಮೀಪುತ್ರ ಮಾಲಿಪಾಟೀಲ, ಶ್ರೀಧರ್ ಸಾಹುಕಾರ್, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ವಡಿಗೇರಾ, ಪ್ರಧಾನ ಕಾರ್ಯದರ್ಶಿಗಳಾದ ರಮೇಶ ದೊಡ್ಡಮನಿ, ಮಲ್ಲಿಕಾರ್ಜುನ ಪೂಜಾರಿ, ಶಿವು ಕೊಂಕಲ, ನಾಗರೆಡ್ಡಿ ಇಬ್ರಾಹಿಂಪುರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.






