ನ.13ರಂದು ಯಾದಗಿರಿ, ನಾಯ್ಕಲ್ನಲ್ಲಿ ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ : ಸಚಿವ ಪ್ರಿಯಾಂಕ್ ಖರ್ಗೆ ಭಾಗಿ

ಯಾದಗಿರಿ: ನಗರದ ಕೊಟಗೇರಾವಾಡಿ ಮತ್ತು ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿ ಈಗಾಗಲೇ ಸ್ಥಾಪಿಸಲಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ನವೆಂಬರ್ 13ರಂದು (ಶುಕ್ರವಾರ) ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ತಿಳಿಸಿದರು.
ಗುರುವಾರ ಮಧ್ಯಾಹ್ನ ನಗರದ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಬೆಳಗ್ಗೆ ಹೈದರಾಬಾದ್ ಮೂಲಕ ಗುರುಮಠಕಲ್ಗೆ ಆಗಮಿಸುವ ಸಚಿವರು, ಅಲ್ಲಿಂದ ಬೆಳಗ್ಗೆ 11 ಗಂಟೆಗೆ ಯಾದಗಿರಿ ನಗರಕ್ಕೆ ಬರಲಿದ್ದಾರೆ. ಮೊದಲು ಕೊಟಗೇರಾವಾಡಿ ಪ್ರದೇಶದಲ್ಲಿ ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ, ಅಲ್ಲಿ ನೆರೆದಿರುವ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ನೇರವಾಗಿ ನಾಯ್ಕಲ್ ಗ್ರಾಮಕ್ಕೆ ತೆರಳಿ, ಅಲ್ಲಿನ ಹೆದ್ದಾರಿ ರಸ್ತೆಯ ಬಳಿ ಪ್ರತಿಷ್ಠಾಪಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿ, ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಹೇಳಿದರು.
ಬಹುದಿನಗಳ ಹಿಂದೆಯೇ ಈ ಕಾರ್ಯಕ್ರಮ ನಡೆಯಬೇಕಿತ್ತು. ಇದೀಗ ಕಾಲ ಕೂಡಿ ಬಂದಿದೆ. ನಾಯ್ಕಲ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದರು.
ಗೃಹ ಇಲಾಖೆಯಿಂದ ಜಿಲ್ಲೆಗೆ ಆಗಬೇಕಿರುವ ಕೆಲವು ಕೆಲಸಗಳ ಕುರಿತು ಸಚಿವರಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪುರ, ಜಿಲ್ಲಾ ವಕ್ತಾರ ಶ್ಯಾಮಸನ್ ಮಾಳಿಕೇರಿ ಹಾಗೂ ಹಿರಿಯ ಮುಖಂಡ ಚಿದಾನಂದಪ್ಪ ಕಾಳೆಬೆಳಗುಂದಿ ಉಪಸ್ಥಿತರಿದ್ದರು.






