ವಡಗೇರಾ | ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಶ್ಲಾಘನೀಯ: ಬಾಬುರಾವ್ ಕಾಡ್ಲೂರು

ವಡಗೇರಾ: ಗ್ರಾಮೀಣ ಭಾಗದಲ್ಲಿನ ಬಡ ರೋಗಿಗಳ ಅನುಕೂಲಕ್ಕಾಗಿ ವಿವಿಧ ಗ್ರಾಮಗಳಲ್ಲಿ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರು ಹೇಳಿದರು.
ತಾಲೂಕಿನ ಹೈಯ್ಯಾಳ (ಬಿ) ಗ್ರಾಮದ ಸುಕ್ಷೇತ್ರ ಶ್ರೀ ಹೈಯ್ಯಾಳ ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಮೂಳೆ ರೋಗ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಖ್ಯಾತ ವೈದ್ಯ ಡಾ. ಎಸ್.ಬಿ. ಕಾಮರೆಡ್ಡಿ ಅವರು ಹಲವು ವರ್ಷಗಳಿಂದ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಾ ರೋಗಿಗಳ ಪಾಲಿನ ಆಪತ್ಬಾಂಧವರಾಗಿದ್ದಾರೆ. ರೋಗಿಗಳ ಪಾಲಿಗೆ ವೈದ್ಯರೇ ದೇವರು ಎಂಬ ಮಾತು ಸುಳ್ಳಲ್ಲ. ಹಗಲು-ರಾತ್ರಿ ಎನ್ನದೆ ವೈದ್ಯರು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಮಾಜಕ್ಕೆ ವೈದ್ಯರ ಕೊಡುಗೆ ಅಪಾರವಾಗಿದೆ. ಇದೇ ರೀತಿ ಇನ್ನಷ್ಟು ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿದರೆ ಅಗತ್ಯ ಸಹಕಾರ ಹಾಗೂ ಬೆಂಬಲ ನೀಡುವುದಾಗಿ ತಿಳಿಸಿದರು.
ಕಾಮರೆಡ್ಡಿ ಆಸ್ಪತ್ರೆಯ ಮುಖ್ಯಸ್ಥ ಡಾ. ಎಸ್.ಬಿ. ಕಾಮರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದ ವೃದ್ಧರು ಹಾಗೂ ಸಾರ್ವಜನಿಕರಿಗಾಗಿ ನಮ್ಮ ಆಸ್ಪತ್ರೆ ವತಿಯಿಂದ ನಿರಂತರವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅನಾರೋಗ್ಯಕ್ಕೆ ನಮ್ಮ ಆಹಾರ ಪದ್ಧತಿಯೇ ಪ್ರಮುಖ ಕಾರಣವಾಗಿದೆ. ಉತ್ತಮ ಆಹಾರ ಸೇವಿಸುವುದರ ಜತೆಗೆ ಪ್ರತಿದಿನ ಯೋಗ ಹಾಗೂ ವ್ಯಾಯಾಮದ ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಆದಷ್ಟು ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹೈಯ್ಯಾಳ (ಬಿ) ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೌನೇಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಪಾಲ್ಗೊಂಡು ಚಿಕಿತ್ಸೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಮಲ್ಲಮ್ಮ ಕೊಮಾರ,ಶ್ರೀಮತಿ ನೀಲಮ್ಮ ಕಣೆಕಲ್, ಶಿವರಾಜ್ ಹಾಲಗೇರಾ,ಕರವೇ ತಾಲೂಕು ಅಧ್ಯಕ್ಷ ಅಬ್ದುಲ್ ಚಿಗನೂರ್, ಕಾಂಗ್ರೆಸ್ ಮುಖಂಡ ಶರಣಪ್ಪ ಕ್ಯಾತ್ನಾಳ, ಮುಕೇಶ್, ಕರವೇ ಹೋಬಳಿ ಘಟಕ ಅಧ್ಯಕ್ಷ ಮಾಳಪ್ಪ, ಡಾ.ಶರೀಫ್, ಶರಣು ಕುರಿ,ಪರಶುರಾಮ್ ಚಲವಾದಿ,ಶಂಕ್ರಣ್ಣ ಬೋಳ್ ಶೆಟ್ಟಿ,ಡಾ.ಇಸೂಫ್,ಅಯ್ಯಣ್ಣ ಪೂಜಾರಿ, ಅಂಗವಿಕಲರ ಪುನರ್ವಸತಿ ಕೇಂದ್ರದ ಶ್ರೀಮತಿ ಶಾಂತಾ, ಎನ್ ಹಾಗೂ ಕಲಬುರ್ಗಿಯ ತಜ್ಞ ವೈದ್ಯರು ಸಿಬ್ಬಂದಿಗಳು ಗ್ಪೂಜಾರಿ ರು ಇನ್ನಿತರರು ಉಪಸ್ಥಿತರಿದ್ದರು






