ವಡಗೇರಾ | ವಿವಿಧ ಗ್ರಾಮದ ನರೇಗಾ ಕಾಮಗಾರಿ ಸ್ಥಳಕ್ಕೆ ಜಿಪಂ ಯೋಜನಾ ನಿರ್ದೇಶಕರ ಭೇಟಿ

ವಡಿಗೇರಾ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ನೋಂದಾಯಿತ ಗ್ರಾಮೀಣ ಕೂಲಿ ಕಾರ್ಮಿಕರ ಕುಟುಂಬಗಳು ಪ್ರತಿ ವರ್ಷ ಗ್ರಾಮ ಪಂಚಾಯಿತಿಯಿಂದ ನೀಡಲಾಗುವ 100 ದಿನಗಳ ಅಕುಶಲ ಕೂಲಿ ಕೆಲಸದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿಬಿ ದೇವರಮನಿ ಮನವಿ ಮಾಡಿದರು.
ಮೇ 14ರಂದು ವಡಗೇರಾ ತಾಲೂಕಿನ ಗುಲಸರಂ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿದ್ದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ, ಗುಣಮಟ್ಟ ಹಾಗೂ ಭೌತಿಕ ಸ್ಥಿತಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಕೂಲಿಕಾರ್ಮಿಕರಿಗೆ ಸಕಾಲದಲ್ಲಿ ಕೂಲಿ ಪಾವತಿಯಾಗುತ್ತಿದೆಯೇ, ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿವೆಯೇ ಎಂಬುದನ್ನು ಪರಿಶೀಲಿಸಿದ ಅವರು, ಕಾರ್ಮಿಕರ ಮಸ್ಟರ್ ರೋಲ್ ಹಾಗೂ ಫೋಟೋ ಆಧಾರಿತ ಹಾಜರಾತಿಯನ್ನೂ ವೀಕ್ಷಿಸಿದರು.
“ನರೇಗಾ ಯೋಜನೆ ಗ್ರಾಮೀಣ ಪ್ರದೇಶದ ದುಡಿಯುವ ಕೈಗಳಿಗೆ ಆಸರೆಯಾಗಬೇಕು. ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಜಾಬ್ ಕಾರ್ಡ್ ಹೊಂದಿರುವ ಪ್ರತಿಯೊಂದು ಕುಟುಂಬಕ್ಕೂ ವರ್ಷದಲ್ಲಿ 100 ದಿನಗಳ ಕೂಲಿ ಕೆಲಸ ನೀಡುವ ಖಾತರಿ ಇರಬೇಕು” ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಹಿಂದಿನ ವರ್ಷಗಳಲ್ಲಿ ಆರಂಭಿಸಿ ಅಪೂರ್ಣವಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಉಳಿದ ಅನುದಾನದ ಅನುಗುಣವಾಗಿ ಪೂರ್ಣಗೊಳಿಸಿ, ಕೂಲಿಕಾರ್ಮಿಕರಿಗೆ ಕೆಲಸ ಒದಗಿಸಬೇಕು. “ನರೇಗಾ ಯೋಜನೆಯಲ್ಲಿ ಕೆಲಸ ಇಲ್ಲ” ಎಂದು ಹೇಳಬಾರದು ಎಂದು ತಿಳಿಸಿದರು.
2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾದ ಸಮುದಾಯ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ಕೂಲಿ ಬೇಡಿಕೆಗೆ ಅನುಗುಣವಾಗಿ ಆರಂಭಿಸಬೇಕು ಎಂದರು.
“ನರೇಗಾ ಯೋಜನೆ ಬಂದ್ ಆಗಿದೆ ಎಂಬ ತಪ್ಪು ಮಾಹಿತಿ ಜನರಲ್ಲಿ ಹರಡುತ್ತಿದೆ. ಇದು ಸರಿಯಲ್ಲ. ಬೇಸಿಗೆ ಸಮಯದಲ್ಲಿ ರೈತರ ಹೊಲಗಳಲ್ಲಿ ಕೂಲಿಕಾರರಿಗೆ ಕೆಲಸ ಸಿಗುವುದಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿಗೆ ಕೆಲಸಕ್ಕಾಗಿ ಬರುವವರಿಗೆ ಸೂಕ್ತ ಮಾಹಿತಿ ನೀಡಿ, ನಗರಗಳಿಗೆ ವಲಸೆ ಹೋಗದಂತೆ ಗ್ರಾಮದಲ್ಲೇ ಉದ್ಯೋಗ ಒದಗಿಸಬೇಕು” ಎಂದು ಹೇಳಿದರು.
ಈ ವೇಳೆ ಯಾದಗಿರಿ ಜಿಲ್ಲಾ ಪಂಚಾಯಿತಿ ನರೇಗಾ ಯೋಜನೆಯ ಎಡಿಪಿಸಿ ಬನ್ನಪ್ಪ ಬೈಟಪುಲ್ಲಿ ಜಿಲ್ಲಾ ಐಇಸಿ ಸಂಯೋಜಕ ಪರಶುರಾಮ ಜೀನಕೇರಾ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಾಯಕ ಬಂದುಗಳು ಹಾಗೂ ಕೂಲಿ ಕಾರ್ಮಿಕರು ಇದ್ದರು.






