ವಡಿಗೇರಾ | ಬರದ ಸಂಕಷ್ಟಕ್ಕೆ ಗೂಳೆ ಹೋಗಬೇಡಿ, ಊರಲ್ಲೇ 125 ದಿನ ಉದ್ಯೋಗ ಪಡೆಯಿರಿ : ಶಶಿಧರ ಹಿರೇಮಠ
ವಿಬಿ-ಜಿ ರಾಮ್-ಜಿ ಯೋಜನೆಯಡಿ ದಿನಕ್ಕೆ 382 ರೂ. ಕೂಲಿ; ಜಾಬ್ ಕಾರ್ಡ್ ಮೇಳದಲ್ಲಿ ಹೊಸ ಕಾರ್ಡ್ ವಿತರಣೆ

ವಡಿಗೇರಾ: ಹವಾಮಾನ ವೈಪರೀತ್ಯದಿಂದ ಮಳೆಯ ಕೊರತೆ ಉಂಟಾಗಿ ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಉದ್ಯೋಗ ಅರಸಿ ರಾಜ್ಯ ಹಾಗೂ ಅಂತರರಾಜ್ಯಗಳಿಗೆ ಗೂಳೆ ಹೋಗುವ ಬದಲು ವಿಬಿ-ಜಿ ರಾಮ್-ಜಿ ಯೋಜನೆಯಡಿ ಊರಲ್ಲೇ 125 ದಿನಗಳ ನಿರಂತರ ಉದ್ಯೋಗ ಪಡೆದು ಆರ್ಥಿಕ ಸಂಕಷ್ಟದಿಂದ ಪಾರಾಗಬೇಕು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಹಿರೇಮಠ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕ ಮಿಷನ್ ಗ್ರಾಮೀಣ (ವಿಬಿ-ಜಿ ರಾಮ್-ಜಿ) ಯೋಜನೆಯಡಿ ಹಾಗೂ ಜಾಬ್ ಕಾರ್ಡ್ ಮೇಳ ಅಭಿಯಾನದ ಮೂಲಕ ವ್ಯಾಪಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಕುಟುಂಬಗಳು ಗೂಳೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಮನೆ ಮನೆಗೆ ತೆರಳಿ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಯೋಜನೆಯಡಿ ಒಬ್ಬರಿಗೆ ದಿನಕ್ಕೆ 382 ರೂ. ಕೂಲಿ ನೀಡಲಾಗುತ್ತಿದ್ದು, ಒಂದು ಜಾಬ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಖಾತರಿಯ ಉದ್ಯೋಗ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಯೋಜನೆಯಡಿ ಅಂತರ್ಜಲ ಮಟ್ಟ ಹೆಚ್ಚಿಸುವ ಗೋ ಕಟ್ಟೆ, ಟ್ರೆಂಚ್, ಸಮಗ್ರ ಕೆರೆ ಅಭಿವೃದ್ಧಿ, ಕಾಲುವೆ ಅಭಿವೃದ್ಧಿ, ಕೃಷಿ ಹೊಂಡ, ಚೆಕ್ ಡ್ಯಾಂ ಸೇರಿದಂತೆ ಸಮುದಾಯ ಹಾಗೂ ವೈಯಕ್ತಿಕವಾಗಿ ಒಟ್ಟು 318 ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಅಂತರ್ಜಲ ವೃದ್ಧಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ತಾಲ್ಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ ಅಭಿಯಾನ ನಡೆಯುತ್ತಿದ್ದು, ಜಾಬ್ ಕಾರ್ಡ್ ಇಲ್ಲದ ಕುಟುಂಬಗಳಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಸ್ಥಳದಲ್ಲೇ ಹೊಸ ಜಾಬ್ ಕಾರ್ಡ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಹಿಂದೆ ಜಾಬ್ ಕಾರ್ಡ್‌ನಿಂದ ಹೆಸರು ತೆಗೆದುಹಾಕಲ್ಪಟ್ಟಿದ್ದರೂ, ಮತ್ತೆ ಸೇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದ ಜನರು ಗೂಳೆ ಹೋಗುವುದನ್ನು ಬಿಟ್ಟು ಯೋಜನೆಯ ಲಾಭ ಪಡೆದು ಊರಲ್ಲೇ ನಿರಂತರ ಉದ್ಯೋಗ ಮಾಡಿಕೊಂಡು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು ಎಂದು ಶಶಿಧರ ಹಿರೇಮಠ ಮನವಿ ಮಾಡಿದ್ದಾರೆ.






