ವಡಿಗೇರಾ | ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ: ಶಾಸಕ ಚೆನ್ನಾರಡ್ಡಿ ಪಾಟೀಲ್

ವಡಿಗೇರಾ: ತಾಲೂಕಿನ ಕುರಕುಂದಾ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಗಳ ವತಿಯಿಂದ ಆಯೋಜಿಸಿದ್ದ ಬಾಲಮೇಳ ಕಾರ್ಯಕ್ರಮಕ್ಕೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ವಡಿಗೇರಾ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗಾಗಿ ಬಾಲಮೇಳ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಬಾಲ್ಯಾವಸ್ಥೆಯಿಂದಲೇ ಮಕ್ಕಳ ಬೌದ್ಧಿಕ, ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಮತ್ತು ಅವರ ಆರೋಗ್ಯ ಸ್ಥಿತಿಗತಿಗಳನ್ನು ಅರಿಯಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತವೆ ಎಂದು ಹೇಳಿದರು.
ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ತಾಯಂದಿರಿಗೆ ಹಾಗೂ ಮಕ್ಕಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಬಾಲಮೇಳ ಕಾರ್ಯಕ್ರಮಗಳು ಉಪಯುಕ್ತವಾಗಿವೆ. ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಪ್ರೀತಿ, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ನೀಡಿ ಭವಿಷ್ಯದಲ್ಲಿ ಅವರನ್ನು ದೇಶ ಹಾಗೂ ನಾಡಿನ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಿಗೆ ಟಿವಿಗಳನ್ನು ವಿತರಿಸಲಾಯಿತು.
ನಂತರ ಕುರಕುಂದಾ ಗ್ರಾಮದ ಹೊರವಲಯದಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಅವರು ಕೂಲಿ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದರು.
ಬೇಸಿಗೆ ದಿನಗಳಲ್ಲಿ ಯಾವುದೇ ಕಾರಣಕ್ಕೂ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗದೆ ತಮ್ಮ ಊರಲ್ಲೇ ನರೇಗಾ ಯೋಜನೆಯಡಿ ಕೆಲಸ ಮಾಡಿ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ಕರೆ ನೀಡಿದರು. ಜೊತೆಗೆ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕೆಲಸ ನಿರ್ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ವಡಿಗೇರಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ಸಿಡಿಪಿಒ ಮಲ್ಲಣ್ಣ ದೇಸಾಯಿ, ಪಿಡಿಒ ಶೇಷಗಿರಿ ರಾವ್, ಅಭಿಯಂತರರು, ಅಂಗನವಾಡಿ ಮೇಲ್ವಿಚಾರಕರು ಚೈತ್ರ, ಮಲ್ಲಿಕಾರ್ಜುನ ಈಟೆ, ಮಾಜಿ ಅಧ್ಯಕ್ಷ ಶರಣಬಸಪ್ಪ, ಶರಣಪ್ಪ ಜಂಬ್ಯಾ ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.







