ಜನಪರ ಸುದ್ದಿ ಪ್ರಚಾರದಲ್ಲಿ ವಾರ್ತಾ ಭಾರತಿ ಮುಂಚೂಣಿಯಲ್ಲಿದೆ : ವಿಶ್ವರಾಧ್ಯ ಸತ್ಯಂಪೇಟೆ

ಯಾದಗಿರಿ: ವಾರ್ತಾ ಭಾರತಿ ಪತ್ರಿಕೆ ಜವಾಬ್ದಾರಿಯುತ, ನಿಷ್ಪಕ್ಷಪಾತ ಮತ್ತು ಜನಪರ ಕಾಳಜಿಯುಳ್ಳ ಸುದ್ದಿಗಳನ್ನು ಪ್ರಕಟಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಜನರ ಧ್ವನಿಯಾಗಲಿದೆ ಎಂದು ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವರಾಧ್ಯ ಸತ್ಯಂಪೇಟೆ ಹೇಳಿದರು.
ವಾರ್ತಾಭಾರತಿ ಕಲಬುರಗಿಯಿಂದ ಕಲ್ಯಾಣ ಕರ್ನಾಟ ಆವೃತ್ತಿ ಬಿಡುಗಡೆಯ ಪ್ರಯುಕ್ತ ಶಹಾಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಓದುಗರು, ವೀಕ್ಷಕರ ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ವಿಶ್ವರಾಧ್ಯ ಸತ್ಯಂಪೇಟೆ, ಪತ್ರಕರ್ತರು ಯಾವುದೇ ಸುದ್ದಿಯಲ್ಲಿ ಜಾತಿಯನ್ನು ಹುಡುಕಬಾರದು. ಮಾಧ್ಯಮಗಳಿಗೆ ಮಹಿಳೆಯರ, ಕಾರ್ಮಿಕರ, ದಲಿತರ, ಅಲ್ಪಸಂಖ್ಯಾತರ ಹಾಗೂ ಕಟ್ಟ ಕಡೆಯ ವ್ಯಕ್ತಿಗಳ ಬಗ್ಗೆ ಕಾಳಜಿ ಇರಬೇಕು ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಬಿರಾದಾರ್ ಮಾತನಾಡಿ, ರಾಜ್ಯದಲ್ಲಿ ಉತ್ತಮ ಪತ್ರಿಕೋದ್ಯಮ ಬೆಳೆಯಬೇಕು. ರೈತಪರ ಕಾಳಜಿಗಳ ಸುದ್ದಿಯನ್ನು ವಾರ್ತಾ ಭಾರತಿ ಪ್ರಕಟಿಸುತ್ತಿದೆ. ಪ್ರಸ್ತುತ ಅತಿವೃಷ್ಟಿಯಿಂದಾಗಿ ರೈತರು ಕಂಗಾಲಾಗಿದ್ದು, ಪತ್ರಿಕೆಗಳು ರೈತರ ಬಗ್ಗೆ ವರದಿ ಪ್ರಕಟಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಅಲ್ ಹಾಜ್ ಬಶೀರ್ ಪಟೇಲ್, ಶಿವಪುತ್ರ ಜವಳಿ, ರಾಮಣ್ಣ ಸಾಧ್ಯಾಪುರ, ಭೀಮಣ್ಣ ಶಾಖಾಪುರ, ಅಶೋಕ್ ಹೊಸಮನಿ, ಅಲ್ಲಾ ಪಟೇಲ್, ಸೈಯದ್ ಖಾದ್ರಿ, ಪ್ರದೀಪ್ ಅಣಬಿ, ಅಂಬರೇಶ್ ಹಳಿಸಗರ್, ಅಬ್ದುಲ್ ಮತಿನ್, ಅಬ್ದುಲ್ ಖದೀರ್, ಭೀಮರಾಯ ಜುನ್ನ, ಸಂಗಣ್ಣ ಸೈದಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಡಿಸೆಂಬರ್ 20ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿಯ ಎಸ್ ಎಂ ಪಂಡಿತ್ ರಂಗ ಮಂದಿರದಲ್ಲಿ ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತಿ ಬಿಡುಗಡೆಯಾಗಲಿದೆ.







