ಸರಕಾರ ರೈತರಿಗೆ ರಸಗೊಬ್ಬರ ನೀಡದಿದ್ದಲ್ಲಿ ಉಗ್ರ ಹೋರಾಟ: ಮಾಜಿ ಸಚಿವ ರಾಜುಗೌಡ

ಸುರಪುರ: ಈಗಾಗಲೇ ತಾಲೂಕಿನಾದ್ಯಂತ ರೈತರು ಭತ್ತ ನಾಟಿ ಮಾಡಿದ್ದಾರೆ ರಸಗೊಬ್ಬರ ಅಭಾವದಿಂದ ಕಂಗಾಲಾಗಿದ್ದಾರೆ ಕೂಡಲೇ ಒಂದು ವಾರದಲ್ಲಿ ಸರಿಪಡಿಸದಿದ್ದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ರಾಜುಗೌಡ ಅವರು ಹೇಳಿದರು.
ಬಿಜೆಪಿ ಕಛೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ರಾಜ್ಯ ಸರ್ಕಾರಕ್ಕೆ 6.30ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಕು ಆದರೆ ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ರಾಜ್ಯಕ್ಕೆ ನೀಡಿದೆ. ಅದರಲ್ಲಿ ಹೆಚ್ಚುವರಿಯಾಗಿ 2.43 ಲಕ್ಷ ಮೆಟ್ರಿಕ್ ಟನ್ ಎಲ್ಲಿಗೆ ಹೋಯಿತು. ಸರ್ಕಾರ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ರೈತರಿಗೆ ಅಭಾವ ಉಂಟು ಮಾಡಿದ್ದಲ್ಲದೆ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕುಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಬಂದ ನಂತರ ಎರಡು ವರ್ಷಗಳಿಂದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿಜೆಪಿ ಸರ್ಕಾರ ನೀಡುತ್ತಿದ್ದ ರೈತ ವಿದ್ಯಾನಿಧಿ ಹಾಗೂ 52 ಲಕ್ಷ ರೈತರಿಗೆ 4000 ರೂಪಾಯಿ ಕಿಸಾನ್ ಸಮ್ಮಾನ್ ಸ್ಥಗಿತಗೊಳಿಸಿದ್ದಾರೆ. ರೈತರ ಕೃಷಿ ಪಂಪ್ಸೆಟ್ಗೆ ಟ್ರಾನ್ಸ್ಪಾರ್ಮರ್ ಅಳವಡಿಸಲು ನಮ್ಮ ಸರ್ಕಾರ 25 ಸಾವಿರ ರೂ. ನಿಗಧಿಪಡಿಸಿತ್ತು ಆದರೆ ಇಂದಿನ ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ 3 ಲಕ್ಷ ರೂ ನೀಡಬೇಕಾದ ಪರಿಸ್ಥಿತಿ ಬಂದಿದೆ.
ಬಿತ್ತನೆ ಬೀಜದ ಮೇಲಿನ ಬೆಲೆಯನ್ನು ಪ್ರತಿ ಕ್ವಿಂಟಾಲ್ಗೆ ಶೇ.20 ರಷ್ಟು ಏರಿಕೆ ಮಾಡಿದೆ.ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ನೀಡಿದ 3454 ಕೋಟಿ ರೂ ನೀಡಿದ ಅನುದಾನದಲ್ಲಿ ನಯಾಪೈಸೆ ನೀಡದೇ ಲೂಟಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕಳೆದ 2 ವರ್ಷಗಳ ಅವಧಿಯಲ್ಲಿ 3400ಕ್ಕಿಂತ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ಮತ್ತು ರಾಣೇಬೆನ್ನೂರಿನಲ್ಲಿ ರಸಗೊಬ್ಬರಕ್ಕಾಗಿ ರೈತರ ಮೇಲೆ ಲಾಠಿಚಾರ್ಜ್ ಮಾಡಿರುವುದಕ್ಕೆ ಖಂಡಿಸುತ್ತೇನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ದುರ್ಗಪ್ಪ ಆಲ್ದಾಳ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ,ಎಚ್.ಸಿ.ಪಾಟೀಲ್, ವೇಣು ಮಾಧವ ನಾಯಕ, ಬಲಭೀಮ ನಾಯಕ ಬೈರಿಮಡ್ಡಿ ಸೇರಿದಂತೆ ಇನ್ನಿತರರಿದ್ದರು.







